ಮೈಸೂರು : ರಾಜ್ಯದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ, ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ ಎಂದರೆ ಅದು ಸಾಂಸ್ಕೃತಿಕ ನಗರಿ ಮೈಸೂರು. ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಈಗಾಗಲೇ ಮೊದಲ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಎರಡನೇ ಫ್ಲೈಓವರ್ ಕೆಲಸವೂ ಚಾಲನೆಯಲ್ಲಿದೆ. ಆದರೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು ಮೈಸೂರಿನ ಪ್ರವೇಶದ್ವಾರದಲ್ಲಿ ಆರಂಭವಾಗಿರುವ ಮೂರನೇ ಫ್ಲೈಓವರ್ನ ಇಂಟರೆಸ್ಟಿಂಗ್ ಸ್ಟೋರಿ..!
ನಗರದ ಪ್ರವೇಶದ್ವಾರದ ಬಳಿ ಫ್ಲೈಓವರ್ – ಮೈಸೂರು-ಬೆಂಗಳೂರು ಹೈವೇ ರಸ್ತೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ನಗರದ ಪ್ರವೇಶದ್ವಾರವಾದ ಮಣಿಪಾಲ್ ಜಂಕ್ಷನ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಕರಗಿಸಲು ಭರ್ಜರಿ ನಾಲ್ಕು ಲೇನ್ ಫ್ಲೈಓವರ್ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಟ್ರಾಫಿಕ್ ಸಮಸ್ಯೆಗೆ ಸಂಪೂರ್ಣ ತಿಲಾಂಜಲಿ – ಹಿಂದೆಲ್ಲಾ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸಲು ಕನಿಷ್ಠ 3ರಿಂದ 4 ಗಂಟೆ ಬೇಕಿತ್ತು. ಆದರೆ ದಶಪಥ ಹೆದ್ದಾರಿ ಬಂದ ಮೇಲೆ ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆಯಾಗಿದ್ದರೂ, ಮೈಸೂರಿನ ಸಿದ್ದಲಿಂಗಪುರ ಮತ್ತು ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ವಾಹನಗಳು ಟ್ರಾಫಿಕ್ ಬಾಟಲ್ನೆಕ್ ಸಮಸ್ಯೆಗೆ ಸಿಲುಕುತ್ತಿದ್ದವು.
ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ದಂಡು ಹೆಚ್ಚಾದಾಗ ಈ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆಯಂತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಈಗ ಮೈಸೂರಿನ ಕೆಂಪೇಗೌಡ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್, ಅಂಡರ್ಪಾಸ್ ಹಾಗೂ ಸರ್ವಿಸ್ ರಸ್ತೆ ಕಾಮಗಾರಿಯನ್ನು ಅತ್ಯಂತ ವೇಗವಾಗಿ ನಡೆಸುತ್ತಿದೆ.
ಕೆಂಪೇಗೌಡ ವೃತ್ತದಲ್ಲಿ 20 ಅಡಿ ಆಳದ ಫುಟಿಂಗ್ ಹಾಕಿ ಭಾರಿ ಗಾತ್ರದ ಪಿಲ್ಲರ್ಗಳನ್ನು ಮೇಲೆತ್ತಲಾಗುತ್ತಿದ್ದು, ಟಿಎಂಟಿ ಕಬ್ಬಿಣ ಹಾಗೂ ಕಾಂಕ್ರೀಟ್ ಕೆಲಸಗಳು ಭರದಿಂದ ಸಾಗುತ್ತಿವೆ. ಬರುವ ಎರಡು ವರ್ಷದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಗಡುವು ವಿಧಿಸಲಾಗಿದೆ.
ಈ ಯೋಜನೆ ಮುಗಿದ ನಂತರ ಬೆಂಗಳೂರಿನಿಂದ ಶರವೇಗದಲ್ಲಿ ಬರುವ ವಾಹನಗಳು ಯಾವುದೇ ಸಿಗ್ನಲ್ ಅಡೆತಡೆಯಿಲ್ಲದೆ ನೇರವಾಗಿ ಮೈಸೂರು ನಗರವನ್ನು ಪ್ರವೇಶಿಸಬಹುದಾಗಿದೆ. ಇದರಿಂದ ವಾರಾಂತ್ಯದ ಮಜಾ ಸವಿಯಲು ಬರುವ ಪ್ರವಾಸಿಗರಿಗೆ ಮತ್ತು ನಿತ್ಯ ಸಂಚರಿಸುವ ಸವಾರರಿಗೆ ಟ್ರಾಫಿಕ್ ಮುಕ್ತಿ ಸಿಗಲಿದ್ದು, ಮೈಸೂರಿನ ಕೀರ್ತಿ ಮುಕುಟಕ್ಕೆ ಈ ಫ್ಲೈಓವರ್ ಮತ್ತೊಂದು ಗರಿಯಾಗಲಿದೆ.



