ಚನ್ನಪಟ್ಟಣ: ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಡಿಜಿಟಲ್ ಅರೆಸ್ಟ್ ಗೆ ಬಲಿಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ. ಕುಮಾರ್ (48) ಮೃತ. ವಂಚನೆಯ ಬಗ್ಗೆ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಮಾರ್ ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಗಂಡುಮಗು ವಿನೊಂದಿಗೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು. ‘ವಿಕ್ರಮ್ ಗೋಸ್ವಾಮಿ ಹೆಸರಿನ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಕರೆಮಾಡಿ, ನಿನ್ನ ಮೇಲೆ ಅರೆಸ್ಟ್ ವಾರಂಟ್ ಬಂದಿದೆ ಎಂದು ಹೆದರಿಸಿದ್ದ. ನಿನ್ನನ್ನು ಪ್ರಕರಣವೊಂದರಲ್ಲಿ ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿ ನಂತರ ಸಹಾಯದ ನೆಪದಲ್ಲಿ 1.95 ಲಕ್ಷ ರೂ. ಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 11 ಲಕ್ಷ ರೂ.ವರೆಗೂ ಹಾಕಿಸಿಕೊಂಡಿದ್ದನು. ಇಷ್ಟಕ್ಕೆ ಸುಮ್ಮನಾಗದೆ ಮತ್ತೆ 2.75 ಲಕ್ಷ ರೂ. ಹಾಕುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಇದರಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.