ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಮದ್ಯವರ್ಜನ ಶಿಬಿರಗಳು ಸಹಕಾರಿಯಾಗಿವೆ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಎ.ಎಸ್.ಪ್ರಸನ್ನ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿಂದು ಸುತ್ತೂರು ಮಠದ ವತಿಯಿಂದ ನಡೆಯುತ್ತಿರುವ ವದ್ಯವರ್ಜನ ಶಿಬಿರದಲ್ಲಿ ತಾಲ್ಲೂಕು ಸವಿತಾ ಸಮಾಜ ಹಾಗೂ ಕ್ಷೌರಿಕ ಸೇವಾ ಬಳಗದ ವತಿಯಿಂದ ಶಿಬಿರಾರ್ಥಿಗಳಿಗೆ ನಡೆದ ಉಚಿತ ಕೇಶ ಮಂಡನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮದ್ಯ ವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಕುಡಿತದ ಚಟದಿಂದ ಹಲವು ಕುಟುಂಬಗಳು ಹಾಳಾಗಿವೆ. ಮದ್ಯ ವ್ಯಸನದಿಂದ ಅತ್ಯಾಚಾರ, ಜಗಳ, ಕೊಲೆ ಮತ್ತು ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶಿಬಿರ ನೆರವಾಗಲಿದ್ದು, ಈ ಶಿಬಿರದಲ್ಲಿ ನಮ್ಮ ಸಂಘದ ವತಿಯಿಂದ ಶಿಬಿರಾರ್ಥಿಗಳಿಗೆ ಉಚಿತ ಕೇಶ ಮಂಡನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕನ್ನಡ ಕಲಾಭಿಮಾನಿ ಕ್ಷೌರಿಕ ಬಳಗದ ಮುಖಂಡ ನಟೇಶ್ ಮಾತನಾಡಿ ದಸರಾ ಸಮಾರಂಭದಲ್ಲಿ ಭಾಗವಹಿಸುವ ಮಾವುತರು ಸೇರಿದಂತೆ ರಾಜ್ಯದಾದ್ಯಂತ ನಡೆಯುವ ಮದ್ಯೆವರ್ಜನ ಶಿಬಿರಗಳಲ್ಲಿ ಭಾಗಿಯಾಗುವ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರಿಕ ಕಾರ್ಯವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಡೆಸಿಕೊಂಡು ಬಂದಿದ್ದೇವೆ ಆದರೂ ಸರ್ಕಾರ ನಮ್ಮ ಬಗ್ಗೆ ತಾತ್ಸಾರ ತೋರುವುದನ್ನು ಬಿಟ್ಟಿಲ್ಲ, ಈಗಾಗಲೇ ರಾಜ್ಯದಲ್ಲಿ ಹೊರರಾಜ್ಯಗಳಿಂದ ಬಂದು ನಮ್ಮ ವೃತ್ತಿಯನ್ನು ಅತಿಕ್ರಮಿಸಿಕೊಂಡಿದ್ದು, ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬಿದ್ದಿವೆ ಆದ್ದರಿಂದ ಕ್ಷೌರಿಕ ವೃತ್ತಿ ಮಾಡುವ ನಮಗೆ ಪ್ರತ್ಯೇಕ ಮೀಸಲಾತಿ ನೀಡುವ ಮೂಲಕ ನಮ್ಮನ್ನು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರ ನೀಡಬೇಕು ಎಂದರು.
ಮದ್ಯವರ್ಜನ ಶಿಬಿರದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್ ಮಾತನಾಡಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ರಾಜ್ಯದಾದ್ಯಂತ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಆ ಮೂಲಕ ನೊಂದ ಕುಟುಂಬಗಳಿಗೆ ಮದ್ಯ ವೆಸನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಾ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ನಾಂದಿಯಾಡುತ್ತಿದ್ದೇವೆ. ಶ್ರೀಗಳು ವ್ಯಸನಮುಕ್ತ ಸಮಾಜದ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಉತ್ತಮ ಸಮಾಜದ ನಿರ್ಮಾಣದ ಶಿಬಿರ ಇದಾಗಿದೆ. ಈ ಕಾರ್ಯಕ್ರಮಕ್ಕೆ ಸ್ಥಳಿಯರು, ತಾಲೂಕಿನ ವಿವಿಧ ಸಂಘಟನೆಗಳ ಸಹಕಾರ ಮರೆಯಲಾಗದು ಎಂದರು.
ಈ ಸಂದರ್ಭದಲ್ಲಿ ಮದ್ಯವರ್ಜನ ಶಿಬಿರದ ಆಯೋಜಕರಾದ ಎಸ್.ಬಸವರಾಜು, ಹುಣಸವಾಡಿ ಹರೀಶ್, ಹೆಚ್.ಕೆ.ಚಿನ್ನಸ್ವಾಮಿ, ಟಿ.ಮಲ್ಲಿಕಾರ್ಜುನ, ತೋಂಟದಾರ್ಯ, ಸಿದ್ದೇಗೌಡ, ಕೊಣನೂರು ಮಲ್ಲೇಶ್,
ಸವಿತಾ ಸಮಾಜದ ಮಾಜಿ ಅಧ್ಯಕ್ಷ ಪಿ.ಜೆ.ವೆಂಕಟೇಶ್, ನಿರ್ದೇಶಕರಾದ ಲೋಕೇಶ್, ಪಂಚವಳ್ಳಿ ಮಲ್ಲೇಶ್, ಮುಖಂಡರಾದ ಪಿ.ಆರ್.ಸುರೇಶ್, ಶ್ರೀನಿವಾಸ್, ಮಂಜು, ಹೇಮಂತ್, ಕಿರಣ್, ರಾಜೇಶ್, ಕೃಷ್ಣ, ಪಿ.ಆರ್.ರಾಮಚಂದ್ರ, ಪಿ.ಟಿ.ನಾರಾಯಣ್, ಪಿ.ಆರ್.ಸತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.