Saturday, January 17, 2026
Google search engine

Homeರಾಜ್ಯರೈಲುಗಳ ಮೂಲಕ ಅಕ್ರಮ ವಲಸೆ ತಡೆಯಲು ಕೇಂದ್ರಕ್ಕೆ ಮನವಿ

ರೈಲುಗಳ ಮೂಲಕ ಅಕ್ರಮ ವಲಸೆ ತಡೆಯಲು ಕೇಂದ್ರಕ್ಕೆ ಮನವಿ

ಬೆಂಗಳೂರು : ಪಶ್ಚಿಮ ಬಂಗಾಳ–ಬೆಂಗಳೂರು ನಡುವಣ ರೈಲು ಸಂಚಾರ ರಾಷ್ಟ್ರೀಯ ಭದ್ರತೆಗೆ ಭಾರೀ ಸವಾಲಾಗುತ್ತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಪತ್ರವನ್ನೂ ಬರೆದಿರುವ ಅವರು, ಅಕ್ರಮ ವಲಸಿಗರು ರೈಲುಗಳ ಮೂಲಕ ದಕ್ಷಿಣ ಭಾರತ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಬೆಂಗಳೂರು ನಡುವೆ ಪ್ರಸ್ತುತ 15ರಿಂದ 17ರಷ್ಟು ವೀಕ್ಲಿ ಮತ್ತು ಡೈಲಿ ರೈಲುಗಳು ಸಂಚರಿಸುತ್ತಿದ್ದು, ಈ ಮಾರ್ಗಗಳನ್ನು ಅಕ್ರಮ ವಲಸಿಗರು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಅಲ್ಲದೆ, ಸಾರ್ವಜನಿಕರಿಂದ ಆಕ್ಷೇಪಗಳೂ ವ್ಯಕ್ತವಾಗಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಅಂತರರಾಷ್ಟ್ರೀಯ ಗಡಿಗಳಲ್ಲಿ ಅಕ್ರಮವಾಗಿ ಪ್ರವೇಶಿಸಿರುವವರು ಈ ಮಾರ್ಗದ ಮೂಲಕ ದಕ್ಷಿಣ ಭಾರತಕ್ಕೆ ನುಸುಳುತ್ತಿದ್ದಾರೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಮಾರ್ಗಗಳಲ್ಲಿ ಪ್ರಯಾಣಿಸುವ ಹಲವರು ನಕಲಿ ಅಥವಾ ಅಕ್ರಮಗಳ ಮೂಲಕ ಪಡೆದ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಬಳಸುತ್ತಿರುವುದು ಮತ್ತೊಂದು ಆತಂಕಕಾರಿ ಅಂಶವಾಗಿದೆ. ಇಂತಹ ದಾಖಲೆಗಳು ನಾಗರಿಕತ್ವದ ಸಾಬೀತು ಅಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿರುವ ಇತ್ತೀಚಿನ ತೀರ್ಪನ್ನೂ ಛಲವಾದಿ ನಾರಾಯಣಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋರ್ಟ್ ಆದೇಶವಿದ್ದ ಹೊರತಾಗ್ಯೂ ಇಂಥ ನಕಲಿ ದಾಖಲೆಗಳನ್ನು ಬಳಸಿಕೊಂಡು ಸ್ಥಳೀಯ ಭದ್ರತಾ ತಪಾಸಣೆಗಳನ್ನು ತಪ್ಪಿಸಿಕೊಂಡು ಸಂಚರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು ನಗರವು ಕಾರ್ಮಿಕ ವಸತಿಗಳ ಪ್ರಮುಖ ಕೇಂದ್ರವಾಗಿದ್ದು, ಪಶ್ಚಿಮ ಬಂಗಾಳ ಹಾಗೂ ಉತ್ತರ ಭಾರತದಿಂದ ಬಂದ ಅಕ್ರಮ ವಲಸಿಗರು ಇಲ್ಲಿ ನೆಲೆಸುತ್ತಿರುವ ಬಗ್ಗೆ ವರದಿಗಳಿವೆ. ಇದರಿಂದ ನಗರ ಹಾಗೂ ರಾಜ್ಯದ ಆಂತರಿಕ ಭದ್ರತೆಗೆ ಗಂಭೀರ ಅಪಾಯ ಎದುರಾಗುತ್ತಿದೆ ಎಂದು ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

ತಕ್ಷಣ ಕೈಗೊಳ್ಳಬೇಕಾದ ಕೆಲವು ಕ್ರಮಗಳ ಬಗ್ಗೆಯೂ ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ. ಅವುಗಳು ಹೀಗಿವೆ,

  • ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಕಟ್ಟುನಿಟ್ಟಿನ ಗುರುತು ಪರಿಶೀಲನೆ ನಡೆಸುವುದು.
  • ಈ ಮಾರ್ಗದ ರೈಲುಗಳ ಸಂಖ್ಯೆಯ ಪುನರ್‌ಪರಿಶೀಲನೆ, RPF ಹಾಗೂ ಗುಪ್ತಚರ ದಳದ ಸಿಬ್ಬಂದಿಯನ್ನು ಗುಪ್ತವಾಗಿ ನಿಯೋಜಿಸಿ ಅನುಮಾನಾಸ್ಪದ ಚಟುವಟಿಕೆಗಳ ನಿಗಾ ಇರಿಸುವುದು.
  • ರೈಲ್ವೆ ಬುಕಿಂಗ್ ವ್ಯವಸ್ಥೆಯನ್ನು SIR/NRC ಸೇರಿದಂತೆ ರಾಷ್ಟ್ರೀಯ ಡೇಟಾಬೇಸ್‌ಗಳಿಗೆ ಜೋಡಿಸುವುದು.

ಭಾರತದ ಗಡಿಗಳ ಭದ್ರತೆ ಹಾಗೂ ನಗರಗಳ ಸುರಕ್ಷತೆ ಭಾರತೀಯ ರೈಲ್ವೆಯ ಜಾಗೃತಿಯ ಮೇಲೆಯೇ ಅವಲಂಬಿತವಾಗಿದೆ ಎಂದು ಹೇಳಿರುವ ನಾರಾಯಣಸ್ವಾಮಿ, ಈ ವಿಷಯವನ್ನು ಆದ್ಯತೆಯ ರಾಷ್ಟ್ರೀಯ ಭದ್ರತಾ ವಿಚಾರವಾಗಿ ಪರಿಗಣಿಸಿ ತ್ವರಿತ ಹಾಗೂ ದೃಢ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular