ಚಾಮರಾಜನಗರ: ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ೨೦೨೫-೨೬ನೇ ಸಾಲಿಗೆ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅಥವಾ ಆಯಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು. ಇಲಾಖೆಯ ಮಾನ್ಯತಾ ಕಾರ್ಡ್ (ಅಕ್ರಿಡೇಷನ್ ಕಾರ್ಡ್) ಹೊಂದಿದ ಪತ್ರಕರ್ತರು ತಮ್ಮ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾನುಭವ, ವೇತನ ವಿವರಗಳನ್ನೊಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಬಯಸುವವರು ಅರ್ಜಿಯೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ವಿತರಿಸಲಾಗಿರುವ ಮಾಧ್ಯಮ ಮಾನ್ಯತಾ ಕಾರ್ಡು ಹೊಂದಿರುವ ಬಗ್ಗೆ ದೃಢೀಕೃತ ಜೆರಾಕ್ಸ್ ಪ್ರತಿ, ಜಾತಿ ದೃಢೀಕರಣಕ್ಕಾಗಿ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅರ್ಜಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಮಾಹಿತಿಗಳಿಗೆ ಅಧಿಕೃತ ಪೂರಕ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದೊಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸರ್ಕಾರದ ವ್ಯಾಪ್ತಿಗೆ ಒಳಪಡುವ ನಿಗಮ, ಮಂಡಳಿಗಳಿoದ ಹಾಗೂ ಸರ್ಕಾರದ ಯಾವುದೇ ಇಲಾಖೆಗಳಿಂದ ಈ ಯೋಜನೆಯಡಿ ಮಾಧ್ಯಮ ಕಿಟ್‌ಗಳನ್ನು ಪಡೆದಿರುವುದಿಲ್ಲ ಎಂದು ರೂ. ೨೦೦ ರ ಬಾಂಡ್ ನಲ್ಲಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ಮಾಧ್ಯಮ ಕಿಟ್ ಒದಗಿಸಲು ಪತ್ರಕರ್ತರ ಸೇವಾ ಹಿರಿತನ, ವಯೋಮಿತಿ ಹಾಗೂ ಸೇವಾನುಭವದ ಗರಿಷ್ಠತೆಯನ್ನು ಪರಿಗಣಿಸಲಾಗುವುದು.
ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ೨೦೨೫ನೇ ಆಗಸ್ಟ್ ೨೨ರ ಸಂಜೆ ೫ ಗಂಟೆಯೊಳಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ.೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು-೫೬೦೦೦೧ ಇವರಿಗೆ ಸಲ್ಲಿಸಬೇಕು. ಲಕೋಟೆಯ ಮೇಲ್ಬಾಗದಲ್ಲಿ ನೋಂದಾಯಿತ ಪತ್ರಕರ್ತರಿಗೆ ಮೀಡಿಯಾ ಕಿಟ್ ಗಾಗಿ ಅರ್ಜಿ ಎಂದು ನಮೂದಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.