Saturday, May 24, 2025
Google search engine

Homeರಾಜಕೀಯಮೋದಿ ಕೆಲಸ ಮೆಚ್ಚಿ ಬಿಜೆಪಿಗೆ ಸೇರುತ್ತಿದ್ದೇನೆ, ಬೆಂಬಲಿಗರ ಸಭೆಯಲ್ಲಿ ಸಂಸದೆ ಸುಮಲತಾ ಘೋಷಣೆ

ಮೋದಿ ಕೆಲಸ ಮೆಚ್ಚಿ ಬಿಜೆಪಿಗೆ ಸೇರುತ್ತಿದ್ದೇನೆ, ಬೆಂಬಲಿಗರ ಸಭೆಯಲ್ಲಿ ಸಂಸದೆ ಸುಮಲತಾ ಘೋಷಣೆ

ಮಂಡ್ಯ: ಕಳೆದ ಕೆಲ ದಿನಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಬಗ್ಗೆ ಕುತೂಹಲ ಗರಿಗೆದರಿತ್ತು. ಇದೀಗ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿದ್ದು, ಸಂಸದೆ ಸುಮಲತಾ ಅವರು ತಮ್ಮ ರಾಜಕೀಯ ನಡೆಯ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಇಂದು ಬುಧವಾರ ಮಂಡ್ಯದಲ್ಲಿ ನಡೆದ ಬೆಂಬಲಿಗರ ಬಹಿರಂಗ ಸಭೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಷ್, ತನ್ನ ಮುಂದಿನ ರಾಜಕೀಯ ನಡೆಯನ್ನು ಘೋಷಿಸಿದ್ದಾರೆ. ಇದಕ್ಕೂ ಸಭೆಯ ಮೊದಲು ಆರಂಭದಲ್ಲಿ ಸುಮಲತಾ ಸಾಧನೆ ಕುರಿತ ನಮ್ಮ ಮಂಡ್ಯ ನಮ್ಮ ಆದ್ಯತೆ ಹೆಸರಿನ ಪುಸ್ತಕ ಬಿಡುಗಡೆ ಮಾಡಲಾಯಿತು. ಆ ಬಳಿಕ ಸಂಸದೆಯಾಗಿ ಐದು ವರ್ಷಗಳ ಸಾಧನೆ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಬಳಿಕ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ, ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ರಾಜಕೀಯ ಬಿಟ್ಟು ಹೋಗಲ್ಲ. ನನಗೆ ಇವತ್ತಿನ ದಿನ ನರೇಂದ್ರ ಮೋದಿ ಅವರು ಕಾಣುತ್ತಿರುವ ಕನಸಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ನನ್ನ ಎಂಪಿ ಸ್ಥಾನವನ್ನು ಬಿಟ್ಟು ಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೀನಿ ಎಂದು ಘೋಷಿಸಿದರು.

೨೭ ವರ್ಷ ಅಂಬರೀಷ್ ಜೊತೆ ನಾನು ಸಂಸಾರ ಮಾಡಿದವಳು. ನಾನು ಸ್ವಾಭಿಮಾನವನ್ನು ಅಂಬರೀಷ್‌ರಿಂದ ಕಲಿತಿದ್ದೇನೆ. ಆದರೆ ನನಗೆ ಗೌರವ ಇಲ್ಲದ ಕಡೆ ನಾನು ಹೋಗಲ್ಲ. ನನಗೆ ಗೌರವ ಇಲ್ಲದ ಕಡೆ ನಾನು ಹೋಗಬೇಕು ಎಂದು ನೀವು ಬಲವಂತ ಮಾಡಬೇಡಿ ಎಂದ ಸುಮಲತಾ, ಕಾಂಗ್ರೆಸ್‌ನವರೇ ಬೇಡ ಎಂದ ಮೇಲೆ ನಾನು ಅಲ್ಲಿಗೆ ಹೋಗಲ್ಲ. ನಾನು ಸ್ವತಂತ್ರ ಸಂಸದೆಯಾಗಿದ್ದರೂ ನನಗೆ ಸಾವಿರಾರು ಕೋಟಿ ಅನುದಾನ ನೀಡಿದ್ದು ಕೇಂದ್ರದ ಬಿಜೆಪಿ ಸರ್ಕಾರ. ದೇಶದ ಪ್ರಧಾನಿಯೇ ನನಗೆ ಗೌರವ ಕೊಡುತ್ತಾರೆ ಎಂದರೆ ನನಗೆ ಅಲ್ಲಿ ಗೌರವ ಇದೆ ಅಲ್ವಾ, ಇವತ್ತು ನಮ್ಮ ದೇಶ ಎಲ್ಲಿತ್ತು ಎಲ್ಲಿಗೆ ಹೋಗಿದೆ ಇಡೀ ದೇಶವೇ ತಿರುಗುವಂತೆ ಮಾಡಿದ್ದು ನರೇಂದ್ರ ಮೋದಿ ಅವರು. ಅವರಿಗೆ ಸ್ವಾರ್ಥ ಇದ್ಯಾ ಆಸ್ತಿ ಮಾಡಬೇಕು ಅನ್ನೋದು ಇದ್ಯಾ ಒಂದೇ ಒಂದು ಭ್ರಷ್ಟಾಚಾರ ಆರೋಪ ಇದ್ಯಾ ಎಂದರು.

ಕಷ್ಟಕರ ಸಮಯದಲ್ಲಿ ಚುನಾವಣೆಗೆ ನಿಂತಾಗ ನನಗೆ ೭ ಲಕ್ಷಕ್ಕಿಂತಲೂ ಹೆಚ್ಚು ಮತಗಳನ್ನು ನನಗೆ ನೀಡಿ, ೧ ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದಕ್ಕಾಗಿ ನಾನು ಹೃದಯಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ ಎಂದ ಸುಮಲತಾ, ನನ್ನ ರಾಜಕೀಯ ಪ್ರವೇಶ ಆಕಸ್ಮಿಕ. ನಾನು ಕಳೆದ ಚುನಾವಣೆಯಲ್ಲಿ ಗೆದ್ದ ನಂತರವೂ ನನ್ನ ದಾರಿ ಸುಗಮ ಮತ್ತು ಸುಲಭವೂ ಆಗಿರಲಿಲ್ಲ. ಆದರೆ ಅದೆಲ್ಲವನ್ನೂ ಮೆಟ್ಟಿನಿಂತು ನಮ್ಮ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು ಎಂಬ ಗುರಿಯೊಂದಿಗೆ ಮುನ್ನಡೆದಿದ್ದೇನೆ. ಕಳೆದ ೫ ವರ್ಷದಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ ಅನುದಾನಗಳನ್ನು ತಂದು ಒಂದಷ್ಟು ಸಾಧನೆಗಳನ್ನು ಮಾಡಿದ ತೃಪ್ತಿ ನನಗಿದೆ. ನೀವು ೫ ವರ್ಷಗಳ ಕಾಲ ನೀಡಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ನಾವು ಮಾತನಾಡಬಾರದು ನಮ್ಮ ಸಾಧನೆಗಳು ಮಾತನಾಡಬೇಕು ಎಂದ ಸಂಸದೆ ಸುಮಲತಾ, ನಾನು ಪ್ರಚಾರಪ್ರಿಯಳಲ್ಲ, ಟೀಕಿಸುವವರಿಗೆ ಆಹಾರ ಸಿಗಬಾರದು ಎಂದು ಸಾಕ್ಷ್ಯಚಿತ್ರ ಮಾಡಿಸಿದೆ. ಮೈಷುಗರ್ ಕಾರ್ಖಾನೆ, ಪಾಂಡವಪುರ ಸಕ್ಕರೆ ಕಾರ್ಖಾನೆ ಸೇರಿದಂತೆ ಕೆಆರ್‌ಎಸ್ ಡ್ಯಾಂ ಉಳಿವಿಗೆ ಹೋರಾಟ, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೇನೆ. ಬೆಂಗಳೂರು-ಮೈಸೂರು ಹೆದ್ದಾರಿಗಾಗಿ ಹೋರಾಡಿದ್ದೇನೆ. ಒಬ್ಬ ಪಕ್ಷೇತರ ಸಂಸದೆಯಾಗಿ ನಾನು ಮಾಡಿರುವ ಐದು ವರ್ಷಗಳ ಕೆಲಸ ಇದು ಬರೀ ೫ ವರ್ಷದ್ದಲ್ಲ ಮುಂದಿನ ೧೦೦ ವರ್ಷಗಳದ್ದು ಎಂದರು.

ಮಂಡ್ಯ ಜಿಲ್ಲೆಯ ಸಂಸದೆಯಾಗಿ, ಈ ಜಿಲ್ಲೆಯ ಸೊಸೆಯಾಗಿ ಮಂಡ್ಯ ಜಿಲ್ಲೆಗೆ ಸುಮಲತಾ ಅಂಬರೀಷ್ ಕೊಡುಗೆ ಏನು ಎಂದು ಕೆಲವರು ಪ್ರಶ್ನಿಸುತ್ತಾರೆ. ಅವರಿಗೆ ನೀವು ಈ ಉತ್ತರವನ್ನು ನೀಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದ ಸುಮಲತಾ, ಇದು ನನ್ನ ಘನತೆಯಲ್ಲ, ಮಂಡ್ಯ ಜಿಲ್ಲೆಯ ಘನತೆಯ ಪ್ರಶ್ನೆ. ನಾನು ಅಂದು ಹುಚ್ಚೇಗೌಡರ ಸೊಸೆಯಾಗಿ ನಿಮ್ಮಲ್ಲಿ ಅಂದು ಮತದಾನ ಕೇಳಿದ್ದೆ. ಅವರು ನಂಗೆ ಅಲ್ಲಿಂದಲೇ ಆಶೀರ್ವಾದ ಮಾಡಿದ್ದರು. ಈಗ ಮಳವಳ್ಳಿಯ ಸೊಸೆ ಋಣ ತೀರಿಸಿದ್ದಾಳೆ ಎಂದು ಹೇಳಿದಾಗ ಸುಮಲತಾ ಭಾವುಕರಾದರು.

೨೦೧೯ರಲ್ಲಿ ಯಾವ ರೀತಿ ಸವಾಲುಗಳು, ಗೊಂದಲಗಳು ಇತ್ತೋ ಅದಕ್ಕಿಂತಲೂ ಹೆಚ್ಚು ಗೊಂದಲ ಈಗಲೂ ಇದೆ. ೨೦೧೯ರಲ್ಲಿ ನನಗೆ ಬಿಜೆಪಿ ಬೆಂಬಲ ಕೊಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಬೆಂಬಲಿಸುವಂತೆ ಕೋರಿದ್ದರು. ೨೦೨೩ರ ಚುನಾವಣೆಯಲ್ಲಿ ನಾನು ಬಿಜೆಪಿಗೆ ಬೆಂಬಲ ನೀಡಿದ್ದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿದೆ. ನಾನು ಕೊನೆಯ ಕ್ಷಣದವರೆಗೂ ಮಂಡ್ಯ ಸೀಟ್ ಅನ್ನು ಬಿಜೆಪಿಯೇ ಉಳಿಸಿಕೊಳ್ಳಲಿ ಎಂದು ಹೋರಾಡಿದ್ದೆ. ನನಗೆ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಮೈಸೂರು ಲೋಕಸಭಾ ಚುನಾವಣೆಯ ಟಿಕೆಟ್ ಕೊಡ್ತೀನಿ ಅಂದರು. ಆದರೆ ನಾನು ಇದ್ದರೂ ಹೋದರೂ ಮಂಡ್ಯದಲ್ಲೇ ಎಂದು ಹೇಳಿದ್ದೆ. ನಾನು ಅಂಬರೀಷ್ ಅವರ ಚೌಕಟ್ಟಿನಲ್ಲಿ ರಾಜಕೀಯ ಮಾಡುತ್ತೇನೆ. ಇವತ್ತು ನನಗೆ ಅವರೇ ಸ್ಪೂರ್ತಿ ಎಂದು ಸುಮಲತಾ ಹೇಳಿದರು.

ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಬಹಿರಂಗ ಬೆಂಬಲ ಘೋಷಿಸಿದ್ದ ಸುಮಲತಾ ಅಂಬರೀಷ್ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾದ ಪರಿಣಾಮ ಲೋಕಸಭಾ ಟಿಕೆಟ್ ಜೆಡಿಎಸ್ ಪಾಲಾಗಿ ಎಚ್‌ಡಿ ಕುಮಾರಸ್ವಾಮಿ ಅಭ್ಯರ್ಥಿಯಗಿದ್ದಾರೆ. ಇದರಿಂದ ಅತಂತ್ರಗೊಂಡಿದ್ದ ಸುಮಲತಾ ಅಭಿಮಾನಿಗಳ ಸಭೆ ಕರೆದು ತೀರ್ಮಾನ ತಿಳಿಸೋದಾಗಿ ಹೇಳಿದ್ದರು.

RELATED ARTICLES
- Advertisment -
Google search engine

Most Popular