Monday, May 19, 2025
Google search engine

HomeUncategorizedರಾಷ್ಟ್ರೀಯಸೇನಾ ಸಂಘರ್ಷ: ನೇರ ಪ್ರಸಾರ ಬೇಡ : ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಮನವಿ

ಸೇನಾ ಸಂಘರ್ಷ: ನೇರ ಪ್ರಸಾರ ಬೇಡ : ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಮನವಿ

ನವದೆಹಲಿ: ಹಾಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಕುರಿತು ನೇರ ಪ್ರಸಾರ ವರದಿ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಎಲ್ಲಾ ಮಾಧ್ಯಮ ಚಾನೆಲ್‌ಗಳು, ಡಿಜಿಟಲ್ ವೇದಿಕೆಗಳು ಮತ್ತು ಸುದ್ದಿ ವೃತ್ತಿ ನಿರತರಿಗೆ ಮನವಿ ಮಾಡಿದೆ.

ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ೪೮ ಗಂಟೆಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ.

ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತ ವಾಯುದಾಳಿ ಮಾಡಿದ್ದು, ಅಲ್ಲದೆ ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದ ನಾಲ್ಕು ಮಹಾನಗರಗಳಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಂ ಅನ್ನು ಕೂಡ ಭಾರತ ನಾಶಪಡಿಸಿದ್ದು, ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


ಯುದ್ಧದ ನೇರ ಪ್ರಸಾರ ಬೇಡ: ಸೇನೆ ಮನವಿ

ಇನ್ನು ಎಲ್ಲಾ ಮಾಧ್ಯಮ ವಾಹಿನಿಗಳು, ಡಿಜಿಟಲ್ ವೇದಿಕೆಗಳು ಮತ್ತು ಸುದ್ದಿ ವೃತ್ತಿನಿರತ ವ್ಯಕ್ತಿಗಳು ಭಾರತೀಯ ಸೇನಾ ಕಾರ್ಯಾಚರಣೆಗಳ ನೇರ ಪ್ರಸಾರ ಮಾಡದಂತೆ ಸೇನೆ ಮನವಿ ಮಾಡಿದೆ. ಭಾರತೀಯ ಸೇನೆಯ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ನೈಜ-ಸಮಯದ ವರದಿ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಇಲಾಖೆ ಸೂಚನೆ ನೀಡಿದ್ದು, ಸೇನಾ ಚಟುವಟಿಕೆಗಳ ನೇರ ಪ್ರಸಾರದಿಂದಾಗಿ ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾಗಬಹುದಾದ ಸಾಧ್ಯತೆ ಇರುವುದರಿಂದ ಈ ಸೂಚನೆ ನೀಡಲಾಗಿದೆ ಎಂದಿದೆ.

ಎಲ್ಲಾ ಮಾಧ್ಯಮ ವಾಹಿನಿಗಳು, ಡಿಜಿಟಲ್ ವೇದಿಕೆಗಳು ಮತ್ತು ಇತರರು ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ರಿಯಲ್ ಟೈಮ್ ರಿಪೋರ್ಟ್ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಅಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೆ ಅಪಾಯ ಉಂಟುಮಾಡಬಹುದು ಮತ್ತು ಸೇನಾ ಸಿಬ್ಬಂದಿ ಜೀವಗಳಿಗೆ ಅಪಾಯವನ್ನು ಉಂಟುಮಾಡಬಹುದು ಎಂದು ರಕ್ಷಣಾ ಇಲಾಖೆ ಹೇಳಿದೆ.

ಇತಿಹಾಸದಲ್ಲೂ ಆಗಿತ್ತು: ಕಾರ್ಗಿಲ್ ಯುದ್ಧ, ೨೬/೧೧ ದಾಳಿಗಳು ಮತ್ತು ಕಂದಹಾರ್ ಅಪಹರಣದಂತಹ ಹಿಂದಿನ ಘಟನೆಗಳು ನೇರ ಪ್ರಸಾರದ ಅಪಾಯಗಳನ್ನು ಮನವರಿಕೆ ಮಾಡಿಕೊಟ್ಟಿವೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ತಿದ್ದುಪಡಿ) ನಿಯಮಗಳು, ೨೦೨೧ ರ ಷರತ್ತು ೬(೧)(ಪಿ) ಪ್ರಕಾರ, ಭಯೋತ್ಪಾದನಾ-ನಿಗ್ರಹ ಕಾರ್ಯಾಚರಣೆಗಳ ಸಮಯದಲ್ಲಿ ಗೊತ್ತುಪಡಿಸಿದ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಲು ಅನುಮತಿಸಲಾಗಿದೆ. ಎಲ್ಲಾ ಮಾಧ್ಯಮಗಳು ರಾಷ್ಟ್ರದ ಸೇವೆ ಸಂಬಂಧಿತ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯುವ ಮೂಲಕ ಕವರೇಜ್‌ನಲ್ಲಿ ಜಾಗರೂಕತೆ, ಸೂಕ್ಷ್ಮತೆ ಮತ್ತು ಜವಾಬ್ದಾರಿಯನ್ನು ಕಾಪಾಡಬೇಕು ಎಂದು ಆಗ್ರಹಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

RELATED ARTICLES
- Advertisment -
Google search engine

Most Popular