ಹ್ಯಾಂಗ್‌ಝೌ (ಚೀನಾ): ೧೯ನೇ ಏಷ್ಯನ್ ಗೇಮ್ಸ್‌ನಲ್ಲಿ ಇಂದು (ಭಾನುವಾರ) ಮಹಿಳೆಯರ ೧,೫೦೦ ಮೀಟರ್ ಓಟದಲ್ಲಿ ಹರ್ಮಿಲನ್ ಬೇನ್ಸ್ ಬೆಳ್ಳಿ ಗೆದ್ದರೆ, ಪುರುಷರ ೧,೫೦೦ ಮೀ ಓಟದಲ್ಲಿ ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಬೇನ್ಸ್ ಅವರು ೪:೧೨.೭೪ ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದರೆ.ಸರೋಜ್ ೩:೩೮.೯೪ ಮತ್ತು ಜಾನ್ಸನ್ ೩:೩೯.೭೪ ಸೆಕೆಂಡ್‌ನಲ್ಲಿ ಓಟ ಮುಗಿಸಿ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ ಕತಾರ್‌ನ ಮೊಹಮದ್ ಅಲ್ಗರ್ನಿ ೩:೩೮.೩೬ ಉತ್ತಮ ಸಮಯದಿಂದ ಚಿನ್ನ ಸಂಪಾದಿಸಿದರು.
ಇವರ ಪೋಷಕರೂ ಸಹ ಅಥ್ಲೆಟಿಕ್ಸ್ ಆಟಗಾರರಾಗಿದ್ದರು. ತಂದೆ ಅಮನದೀಪ್ ಬೈನ್ಸ್ ೧,೫೦೦ ಮೀ ಓಟದಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದು, ತಾಯಿ ಮಾಧುರಿ ಸಕ್ಸೇನಾ ೨೦೦೨ರ ಏಷ್ಯನ್ ಗೇಮ್ಸ್ ೮೦೦ ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆ. ೨೫ ವರ್ಷದ ಹರ್ಮಿಲನ್ ೨೦೨೨ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಅನ್ನು ಗಾಯದ ಕಾರಣದಿಂದ ಕಳೆದುಕೊಂಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಗಾಯದಿಂದ ಮರಳಿದ ಅವರು ಏಷ್ಯಾಡ್‌ನಲ್ಲಿ ಬೆಳ್ಳಿ ಪದಕ ಸಾಧನೆ ತೋರಿದ್ದಾರೆ.