ನವದೆಹಲಿ: ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು 2026ರ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಯುವಕರು ಮತ್ತು ಮಹಿಳೆಯರಿಗೆ ವಿಶೇಷ ಆಹ್ವಾನ
ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿರುವ ಪ್ರಧಾನಿ, ವಿಶೇಷವಾಗಿ ಯುವ ಮತದಾರರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದ್ದಾರೆ. “ಪ್ರತಿಯೊಂದು ಮತವು ದೇಶದ ಮತ್ತು ರಾಜ್ಯದ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ” ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ರಾಜ್ಯವಾರು ಪ್ರಧಾನಿ ಮೋದಿಯವರ ಸಂದೇಶಗಳು ಹೀಗಿದೆ;
ಪುದುಚೇರಿ: “ಪುದುಚೇರಿಯ ಪ್ರತಿಯೊಬ್ಬ ಮತದಾರರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು. ನಿಮ್ಮ ಮತವು ಪುದುಚೇರಿಯ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಲಿದೆ” ಎಂದು ಮೋದಿ ‘ಎಕ್ಸ್’ (ಟ್ವಿಟರ್) ಮೂಲಕ ತಿಳಿಸಿದ್ದಾರೆ.
ಅಸ್ಸಾಂ: ಅಸ್ಸಾಂನ ಜನತೆಗೆ ಅವರ ಸಾಂವಿಧಾನಿಕ ಕರ್ತವ್ಯವನ್ನು ನೆನಪಿಸಿದ ಪ್ರಧಾನಿ, ಯುವಕರು ಮತ್ತು ಮಹಿಳೆಯರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ಈ ಚುನಾವಣೆಯನ್ನು ಪ್ರಜಾಪ್ರಭುತ್ವದ ದೊಡ್ಡ ಯಶಸ್ಸನ್ನಾಗಿ ಮಾಡಬೇಕೆಂದು ಆಶಿಸಿದ್ದಾರೆ.
ಕೇರಳ: ಕೇರಳದ ಮತದಾರರೂ ಸಹ ದಾಖಲೆ ಮಟ್ಟದಲ್ಲಿ ಭಾಗವಹಿಸಿ, ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ಮತದಾನ ಮಾಡುವುದು ನಾಗರಿಕರ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವ ಮಹತ್ವದ ಅವಕಾಶ. ನಾವೆಲ್ಲರೂ ನಮ್ಮ ಮತಾಧಿಕಾರವನ್ನು ಬಳಸುವ ಮೂಲಕ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸಶಕ್ತಗೊಳಿಸೋಣ.” ಎಂದಿದ್ದಾರೆ.



