ಬಳ್ಳಾರಿ : ನಗರ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರ ಸಂಗ್ರಹಿಸಿದ್ದ ಗೋಡೌನ್ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ದಾಳಿ ನಡೆಸಿದೆ. ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ನಡೆದ ಈ ದಾಳಿಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.
ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಎಡ್ವಿನ್ ಎಂಬವರ ಮಾಲೀಕತ್ವದ ಗೋಡೌನ್ನಲ್ಲಿ ರೈತರಿಗೆ ವಿತರಿಸಬೇಕಾದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ, ಮುಂದಿನ ದಿನಗಳಲ್ಲಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹುನ್ನಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಳಿ ವೇಳೆ ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ಟಿಬಿ ಡ್ಯಾಂ ಗೇಟ್ ರಿಪೇರಿ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ನೀರಿನ ಕೊರತೆ ಇರುವುದರಿಂದ ಬಳ್ಳಾರಿಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಕಡಿಮೆಯಾಗಿದೆ. ಈ ಸಂದರ್ಭದಲ್ಲೇ ಯೂರಿಯಾ ಸಂಗ್ರಹಿಸಿಡಲಾಗಿದೆ. ಜೂನ್ ತಿಂಗಳ ಮುಂಗಾರು ವೇಳೆ ಯೂರಿಯಾ ಗೊಬ್ಬರಕ್ಕೆ ಭಾರೀ ಬೇಡಿಕೆ ಉಂಟಾಗುವ ಸಾಧ್ಯತೆ ಇರುವುದರಿಂದ, ಈಗಿನಿಂದಲೇ ಅಕ್ರಮವಾಗಿ ಸ್ಟಾಕ್ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



