ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೂಂಡಾಗಿರಿ ಶುರುವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನ ಗೂಂಡಾಗಿರಿ ಶುರುವಾಗಿದೆ. ಮುನಿರತ್ನ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ. ಶಾಸಕರ ಮೇಲೆ ಹಲ್ಲೆ ಮಾಡುವ ಪ್ರಯತ್ನ, ಸಂಸದರನ್ನು ಕಾರ್ಯಕ್ರಮಕ್ಕೆ ಕರೆಯದಿರುವುದು ತಪ್ಪು, ಇದು ನಿಜಕ್ಕೂ ಗೂಂಡಾಗಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಕಾರ್ಯಕ್ರಮ ಎಂದು ಹೇಳಿ ಆ ಭಾಗದ ಶಾಸಕರು, ಸಂಸದರಿಗೆ ಆಹ್ವಾನಿಸಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮುನಿರತ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಓರ್ವ ಶಾಸಕರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು ಎಷ್ಟು ಸರಿ? ಇದನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ಮಾಡುತ್ತಿದೆ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಸುರಿಯುತ್ತಿದ್ದಾರೆ. ರಸ್ತೆಗಳಲ್ಲಿ ಗುಂಡಿ ಬಿದ್ದು ಜನರು ಸಾಯುತ್ತಿದ್ದಾರೆ. ಇದ್ಯಾವುದನ್ನೂ ಸರಿಪಡಿಸದೇ ನಡಿಗೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಇವರು ನಡಿಗೆ ಮಾಡುತ್ತಿದ್ದಾರೆ? ಇದು ನಡುಗೆ ಕಾರ್ಯಕ್ರಮವಲ್ಲ ರಾಜಕೀಯಕ್ಕಾಗಿ ದೊಂಬರಾಟ ಎಂದು ಕಿಡಿಕಾರಿದರು.