ಬಳ್ಳಾರಿ: ಹೆಪಟೈಟಿಸ್ ರೋಗವು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯು ಮರಣದ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಸಾಂಕ್ರಮಿಕ ರೋಗದ ಬಗ್ಗೆ ಜನರಿಗೆ ಅರಿವು ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದಡಿ “One Life One Liver” ಎಂಬ ಆಶಯದಂತೆ ನಗರದ ವಿಮ್ಸ್‍ನ ವೈದ್ಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಪಟೈಟಿಸ್ ರೋಗವು ಮೊದಲು ಸಾಂಕ್ರಾಮಿಕ ರೋಗವಲ್ಲದಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಪಟೈಟಿಸ್ ಒಂದು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಯಿತು. ಇದಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ಹಾಗೂ ವಾಕ್ಸಿನೇಷನ್ ಇರುವುದರಿಂದ, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಪಟೈಟಿಸ್ ಕಾಯಿಲೆಯ ಅರಿವಿನ ಕೊರತೆಯಿಂದಾಗಿ ಪ್ರತಿ ವರ್ಷ ಸಾವಿರಾರು ಜನರು ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 360 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.ವಿಮ್ಸ್‍ನ ನಿರ್ದೇಶಕ ಡಾ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ.ಬರೂಚ್ ಬ್ಲಂಬರ್ಗ್ ಅವರು ಹೆಪಟೈಟಿಸ್ ಬಿ ವೈರಸ್‍ನ್ನು ಕಂಡುಹಿಡಿದ ನಂತರ, ಇದರ ರೋಗ ನಿರ್ಣಯದ ಪರೀಕ್ಷೆ ಮತ್ತು ವೈರಸ್ ಚಿಕಿತ್ಸೆಗಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಡಾ.ಬ್ಲಂಬರ್ಗ್ ಅವರ ಆವಿಷ್ಕಾರದ ಗೌರವಾರ್ಥವಾಗಿ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲ ಬಾರಿಗೆ 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಿತು. ಇದರ ನಂತರ ಪ್ರತಿವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಎನ್.ವಿ.ಹೆಚ್.ಸಿ.ಪಿ ಅಧಿಕಾರಿ ಡಾ.ಇಂದ್ರಾಣಿ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 2023 ರಲ್ಲಿ ವಿಶ್ವ ಹೆಪಟೈಟಿಸ್ ದಿನದ ಥೀಮ್ ‘ಒಂದು ಜೀವನ, ಒಂದು ಯಕೃತ್ತು” ಆಗಿದ್ದು, ನಮಗೆ ಒಂದೇ ಜೀವನವಿದೆ ಹಾಗೂ ನಮ್ಮ ದೇಹದಲ್ಲಿ ಕೇವಲ ಒಂದು ಯಕೃತ್ತು ಇರುವಂತಹದ್ದು, ಹೆಪಟೈಟಿಸ್ ಎಂಬ ಲಿವರ್ ಸಂಬಂಧಿ ಕಾಯಿಲೆ ಈ ಎರಡನ್ನು ಹಾಳು ಮಾಡುತ್ತದೆ. ಈ ವರ್ಷದ ವಿಶ್ವ ಹೆಪಟೈಟಿಸ್ ದಿನದ ಗಮನವು ಜನರ ಒಟ್ಟಾರೆ ಯೋಗ ಕ್ಷೇಮಕ್ಕಾಗಿ ಆರೋಗ್ಯಕರ ಯಕೃತ್ತಿನ ಮಹತ್ವ ತಿಳಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ.ಎನ್, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಖಾಸಾ ಸೋಮಶೇಖರ್, ವಿಮ್ಸ್‍ನ ಟಿ.ಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಸಿ.ಎಂ., ವಿಮ್ಸ್‍ನ ಟ್ರಾಮಾ ಕೇರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವ ನಾಯ್ಕ, ವಿಮ್ಸ್‍ನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ.ಬಸವರಾಜ.ಎಸ್, ಎನ್.ವಿ.ಹೆಚ್.ಸಿ.ಪಿ ನೋಡಲ್ ಅಧಿಕಾರಿ ಡಾ. ಜ್ಞಾನ್ ಅಭಿಲಾಷ್, ವಿಮ್ಸ್‍ನ ರಕ್ತಕೇಂದ್ರದ ಪ್ರಭಾರ ಅಧಿಕಾರಿ ಡಾ.ಶುಭಾ ಬಿರಾದಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ಜಿಲ್ಲಾ ಎನ್.ವಿ.ಬಿ.ಡಿ.ಸಿ.ಪಿ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲೂಕ ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.