Monday, October 6, 2025
Google search engine

Homeರಾಜ್ಯಸುದ್ದಿಜಾಲದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್: HWC ಸ್ಥಾಪನೆಗೆ 24.70 ಕೋಟಿ ರೂ. ಮಂಜೂರು...

ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್: HWC ಸ್ಥಾಪನೆಗೆ 24.70 ಕೋಟಿ ರೂ. ಮಂಜೂರು ಸಂಸದ ಕ್ಯಾ.ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ(HWC) ಸ್ಥಾಪನೆಗೆ ಒಟ್ಟು 24.70 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ PM-ABHIM ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಿಗೂ ಹೊಸ ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಸ್ಥಾಪನೆಗೆ ಅನುದಾನ ಮಂಜೂರು ಮಾಡಲಾಗಿದೆ. ಪ್ರತಿಯೊಂದು ಆಯುಷ್ಮಾನ್‌ ಭಾರತ್‌ ಹೆಲ್ತ್‌ ಸೆಂಟರ್‌ ಸ್ಥಾಪನೆಗೂ ತಲಾ 65 ಲಕ್ಷ ರೂ. ಮಂಜೂರಾಗಿದ್ದು, ಅದರಡಿ ಸೂಕ್ತ ಕಟ್ಟಡ ಸೇರಿದಂತೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಒಟ್ಟು 38 ಊರುಗಳಲ್ಲಿ ನೂತನ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಸ್ಥಾಪಿಸಲು ಟೆಂಡರ್‌ ಪ್ರಕ್ರಿಯೆ ಕೂಡ ಪೂರ್ಣಗೊಳ್ಳಲಿದೆ ಎಂದು ಸಂಸದ ಕ್ಯಾ.ಚೌಟ ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಸ್ಥಾಪನೆಯಿಂದ ಗ್ರಾಮೀಣ ಭಾಗದ ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲದ ಊರುಗಳಿಗೂ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಧಾನಮಂತ್ರಿಗಳ ಈ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ನೆರವಾಗಲಿವೆ. ಹೀಗಾಗಿ, ಈ ಎಚ್‌ಡಬ್ಲ್ಯುಸಿ ಕೇಂದ್ರಗಳ ಸ್ಥಾಪನೆಗೆ ಅನುದಾನ ಮಂಜೂರು ಮಾಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಹಾಗೂ ಆರೋಗ್ಯ ಸಚಿವಾಲಯಕ್ಕೆ ಧನ್ಯವಾದ ಸಲ್ಲಿಸುವುದಾಗಿ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

38 HWC ಕೇಂದ್ರಗಳು ಹೀಗಿವೆ:

ಪುತ್ತೂರು ತಾಲೂಕಿನ ಕೈಕಂಬ, ಪಡ್ನೂರು, ನೆಟ್ಟಾರು, ಕುರಿಯ, ಕುಟ್ರುಪಾಡಿ ಮತ್ತು ನೆಕ್ಕಿಲಾಡಿ. ಸುಳ್ಯದ ಐನಕಿದು, ನೆಲ್ಲುರು ಕೆಮ್ರಾಜೆ, ಸುಳ್ಯ-ಡಿ, ತೋಡಿಕಾನ, ಸುಳ್ಯ-ಎ, ಸುಳ್ಯ-ಬಿ ಮತ್ತು ಸುಳ್ಯ-ಸಿ. ಬಂಟ್ವಾಳ ತಾಲೂಕಿನ ದೇವಸ್ಯಪಡೂರು, ಮಂಗಿಲಪದವು, ಮೂಡುಪಡುಕೋಡಿ, ಸರಪಾಡಿ, ವೀರಕಂಬ, ಸಜಿಪಪಡು, ವಿಟ್ಲ ಮುನ್ನೂರು (ಶಂಭೂರು), ಕುರಿಯಾಳ ಮತ್ತು ಪೊಳಲಿ.
ಬೆಳ್ತಂಗಡಿ ತಾಲೂಕಿನ ಕುತ್ಲೂರು, ನಾಲ್ಕೂರು, ತೆಂಕ ಕರಂದೂರು, ಲಾಯಿಲಾ- ಎ, ನ್ಯಾಯತರ್ಪು ಮತ್ತು ಪುದುವೆಟ್ಟು. ಮಂಗಳೂರು ತಾಲೂಕಿನ ಕೆಂಜಾರು, ಮನ್ನಬೆಟ್ಟು, ಮೂಡುಶೆಡ್ಡೆ ಮತ್ತು ಕೊಲ್ಲೂರು. ಮೂಡುಬಿದಿರೆಯ ವಾಲ್ಪಡಿ, ಮಾರ್ಪಡಿ-ಎ, ಮಾರ್ಪಡಿ-ಬಿ, ತೋಕೂರು ಪ್ರಾಂತ್ಯ-ಬಿ ಮತ್ತು ಪ್ರಾಂತ್ಯ-ಸಿ.

RELATED ARTICLES
- Advertisment -
Google search engine

Most Popular