ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜ.೫ರಿಂದ ೭ರವರೆಗೆ ಮೂರು ದಿನಗಳ ಕಾಲ ಶ್ರೀ ಅಯ್ಯಪ್ಪ ಸ್ವಾಮಿ ಜಾತ್ರೆ ಮತ್ತು ಕೊಂಡ ಮಹೋತ್ಸವ ನೆರವೇರಲಿದೆ ಎಂದು ದೇವಸ್ಥಾನ ಸಂಘದ ಅಧ್ಯಕ್ಷ ಬಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಜ.೫ರಂದು ಶುಕ್ರವಾರ ಧ್ವಜಾರೋಹಣ ಕಾರ್ಯಕ್ರಮ, ಶನಿವಾರ ಬೆಳಿಗ್ಗೆ ನವಗ್ರಹ ಹೋಮ ಗಣಪತಿ ಹೋಮ ಮತ್ತು ಗಂಗೆ ತರುವ ಕಾರ್ಯಕ್ರಮ.
ಅದೇ ದಿನ ಸಂಜೆ ಐದು ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯವರ ಬೆಳ್ಳಿ ವಿಗ್ರಹದ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ನೆರವೇರಿಸಲಾಗುತ್ತದೆ. ಹಾಗೂ ರಾತ್ರಿ ೯ ಗಂಟೆಗೆ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಂದ ವಚನ ಕಾರ್ಯಕ್ರಮ ನಡೆಯಲಿದೆ. ಜ.೭ರಂದು ಭಾನುವಾರ ಬೆಳಗಿನ ಜಾವ ಕೊಂಡಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಈ ಸಂಬಂಧ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಯ್ಯಪ್ಪಸ್ವಾಮಿ ಜಾತ್ರೆ ಮತ್ತು ಕೊಂಡ ಮಹೋತ್ಸವಕ್ಕಾಗಿ ಸಂಘದ ಕಾರ್ಯದರ್ಶಿ ಸ್ವಾಮಿ ಗೌಡ, ನಿರ್ದೇಶಕರಾದ ನಾಗೇಂದ್ರ, ಬಿ.ಆರ್.ಸ್ವಾಮಿ, ಮಹದೇವಸ್ವಾಮಿ ಮತ್ತು ಕುಮಾರ್ ಕಾಣಿಕೆ ಸಂಗ್ರಹ ಮಾಡಿದರು. ಈ ಮೂರು ದಿನಗಳ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.