ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಪಾನ್ ಪರಾಗ್, ತಂಬಾಕು ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವಿಸಿ ಉಗುಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಈ ನಿಯಮ ಉಲ್ಲಂಘಿಸಿದರೆ ₹1,000 ದಂಡ ವಿಧಿಸಲು ಅವಕಾಶವಿದೆ.
‘ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ಉತ್ಪಾದನೆ, ವಿತರಣೆಯ ನಿಯಂತ್ರಣ) (ಕರ್ನಾಟಕ ತಿದ್ದುಪಡಿ) ಮಸೂದೆ–2024’ಕ್ಕೆ ರಾಷ್ಟ್ರಪತಿಯ ಅಂಕಿತ ಲಭಿಸಿದ್ದು, ಇದು ಇನ್ನುಬೇರೆ ಕಟ್ಟುನಿಟ್ಟಾದ ನಿಯಮಗಳನ್ನು ಒಳಗೊಂಡಿದೆ.
ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷಿದ್ಧವಾಗಿದೆ. ಹುಕ್ಕಾ ಸೇವೆಗೂ ನಿಷೇಧ ಹೇರಲಾಗಿದ್ದು, ಉಲ್ಲಂಘನೆ ಮಾಡಿದರೆ ₹50,000 ರಿಂದ ₹1 ಲಕ್ಷದವರೆಗೆ ದಂಡ ಮತ್ತು 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.