ಮೈಸೂರು: ನಾಡಿನ ಪ್ರತಿಷ್ಠಿತ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಮತ್ತೊಂದು ಗರಿ ಪ್ರಾಪ್ತವಾಗಿದೆ. ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಬಂಡೀಪುರ ಆನೆಗಳ ಸಂಖ್ಯೆಯಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ.
ವಿಶ್ವ ಆನೆ ದಿನ (ಆ.೧೨) ಆಚರಣೆಗೆ ಮೂರು ದಿನವಿರುವಾಗಲೇ ರಾಜ್ಯ ಮಟ್ಟದ ಆನೆ ಗಣತಿ ವರದಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಅರಣ್ಯಗಳಿಗಿಂತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ.
೨೦೨೩ರ ಮೇ ೧೭ರಿಂದ ೧೯ರವರೆಗೆ ೨೩ ವಿಭಾಗದಲ್ಲಿ ನಡೆದ ಆನೆ ಗಣತಿಯಲ್ಲಿ ೫೯೧೪ ರಿಂದ ೬೮೭೭ ಆನೆಗಳು ಕಂಡು ಬಂದಿದ್ದು, ಅದರಲ್ಲಿ ರಾಜ್ಯದ ಆನೆಗಳ ಸಂಖ್ಯೆಯಲ್ಲಿ ೬,೩೯೫ ಎಂದು ಗುರುತಿಸಲಾಗಿದೆ. ರಾಜ್ಯದ ೫ ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾಮ ಸೇರಿದಂತೆ ೨೩ ವಲಯಗಳಲ್ಲಿ ನಡೆಸಿದ ಗಣತಿಯಲ್ಲಿ ಮೊದಲ ನಾಲ್ಕು ಸ್ಥಾನಗಳು ಮೈಸೂರು-ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಮೂರು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಒಂದು ವನ್ಯಧಾಮ ತನ್ನದಾಗಿಸಿಕೊಂಡಿದೆ.
ಈ ಬಾರಿಯ ಆನೆ ಗಣತಿಯು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತಾಂತ್ರಿಕ ನೆರವಿನೊಂದಿಗೆ ಅರಣ್ಯ ಇಲಾಖೆ ನಡೆಸಿ ಗಣತಿ ಮೂರು ವಿಧಾನದಲ್ಲಿ ನಡೆಸಲಾಗಿತ್ತು. ಮೆ.೧೭ರಂದು ೫.೦ ಚ.ಕಿ.ಮಿ ವ್ಯಾಪ್ತಿಯ ಬ್ಲಾಕ್‌ಗಳಲ್ಲಿ ಹಾಗೂ ಬೀಟ್ ಸಂಖ್ಯೆಯಲ್ಲಿ ಶೇ.೩೦ರಿಂದ ೫೦ ಪ್ರದೇಶದಲ್ಲಿ ನೇರ ಎಣಿಕೆ ಕಾರ್ಯ ನಡೆಸಲಾಗಿತ್ತು. ಮೇ.೧೮ರಂದು ೨ ಕಿ.ಮಿ ಉದ್ದದ ಟ್ರಾಂಜಾಕ್ಟ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಲದ್ದಿ ಸಮೀಕ್ಷೆ ನಡೆಸಲಾಗಿತ್ತು. ಮೇ.೧೯ರಂದು ಕೆರೆ, ಕಟ್ಟೆ(ವಾಟರ್ ಹೋಲ್) ಬಳಿ ಸಮೀಕ್ಷೆ ನಡೆಸಿ, ಆನೆಗಳ ಗಣತಿ, ಅವುಗಳ ಚಲನವಲನ, ಲಿಂಗದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು.
ಗಣತಿ ವೇಳೆ ಒಟ್ಟು ಗುರುತಿಸಲ್ಪಟ್ಟ ೩೨ ವಿಭಾಗದಲ್ಲಿ ಆನೆ ಗಣತಿ ನಡೆಸಲಾಗಿತ್ತಾದರೂ, ೨೩ ವಿಭಾಗದಲ್ಲಿ ಮಾತ್ರ ಆನೆಗಳ ಇರುವಿಕೆ ದೃಢಪಟ್ಟಿತ್ತು. ಈ ೨೩ ವಿಭಾಗದಲ್ಲಿ ೧೮,೯೭೫ ಚದರ ಕಿ.ಮಿ ವ್ಯಾಪ್ತಿಯ ಅರಣ್ಯ ಪ್ರದೇಶವಿದ್ದು, ಅವುಗಳಲ್ಲಿ ೬,೧೦೪ ಚದರ ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಸಮೀಕ್ಷೆ ನಡೆಸಲಾಗಿತ್ತು. ತರಬೇತಿ ಪಡೆದ ಅರಣ್ಯ ಸಿಬ್ಬಂದಿಗಳು ನಡೆಸಿದ ಈ ಆನೆ ಗಣತಿಯಲ್ಲಿ ನೇರ ಸಮೀಕ್ಷೆಯಲ್ಲಿ ೨೨೧೯ ಆನೆಗಳು ಗೋಚರಿಸಿದ್ದವು. ಅಂತಿಮವಾಗಿ ಮೂರು ಹಂತದ ಗಣತಿಯಲ್ಲಿ ರಾಜ್ಯದಲ್ಲಿ ೫೯೧೪ ರಿಂದ ೬೮೭೭ ಆನೆಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂಕಿ ಅಂಶವನ್ನು ಪರಿಶೀಲಿಸಿದ ತಜ್ಞರು ೦.೩೪ ಸಾಂದ್ರತೆಯಂತೆ ರಾಜ್ಯದಲ್ಲಿ ಸರಾಸರಿ ೬,೩೯೫ ಆನೆಗಳಿವೆ ಎಂದು ಘೋಷಿಸಿದ್ದಾರೆ.
ಎಲ್ಲೆಲ್ಲಿ, ಎಷ್ಟು ಆನೆಗಳು: ಬಂಡೀಪುರ ೧೧೧೬, ನಾಗರಹೊಳೆಯಲ್ಲಿ ೮೩೧, ಮಹದೇಶ್ವರ ಬೆಟ್ಟ ೭೦೬, ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ೬೧೯, ಮಡಿಕೇರಿ ಪ್ರಾದೇಶಿಕ ವಿಭಾಗ ೨೧೪, ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ ೧೧೩, ಹಾಸನ ವಿಭಾಗದಲ್ಲಿ ೬೬, ವಿರಾಜಪೇಟೆ ವಿಭಾಗದಲ್ಲಿ ೫೮ ಆನೆಗಳಿವೆ.
ವರ್ಷವಾರು ಆನೆಗಳ ಗಣತಿ ವಿವರ: ೨೦೧೦ರಲ್ಲಿ ನಡೆದ ಗಣತಿಯಲ್ಲಿ ಕರ್ನಾಟಕದಲ್ಲಿ ೫೭೪೦ ಆನೆ, ೨೦೧೨ರ ಗಣತಿಯಲ್ಲಿ ೬೦೭೨, ೨೦೧೭ರ ಗಣತಿಯಲ್ಲಿ ೬೦೪೯ ಆನೆಗಳು ಕಂಡು ಬಂದಿದ್ದವು. ಈ ಸಾಲಿನ ಗಣತಿಯಲ್ಲಿ ೬೩೯೫ ಆನೆಗಳು ಕಂಡು ಬಂದಿವೆ.