Wednesday, May 13, 2026
Google search engine

Homeರಾಜ್ಯಬೆಂಗಳೂರು ನಗರ ಪಾಲಿಕೆ ಚುನಾವಣೆ: ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ

ಬೆಂಗಳೂರು ನಗರ ಪಾಲಿಕೆ ಚುನಾವಣೆ: ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಜನಗಣತಿ 2026ರ ಕಾರ್ಯಗಳಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿರುವ ಹಿನ್ನೆಲೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ನಡೆಸಲು ಹೆಚ್ಚಿನ ಸಮಯ ನೀಡುವಂತೆ ರಾಜ್ಯ ಚುನಾವಣಾ ಆಯೋಗ (SEC) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ಕುರಿತು ಸೋಮವಾರ ಅಫಿಡವಿಟ್ ಸಲ್ಲಿಸಿರುವ ಆಯೋಗ, “ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ” ಚುನಾವಣೆಗೆ ಹೆಚ್ಚುವರಿ ಕಾಲಾವಕಾಶ ಅಗತ್ಯವಾಗಿದೆ ಎಂದು ತಿಳಿಸಿದೆ.

ಜಿಬಿಎ ಉಲ್ಲೇಖಿಸಿರುವ ಸಿಬ್ಬಂದಿ ಕೊರತೆ ಮತ್ತು ಆಡಳಿತಾತ್ಮಕ ತೊಂದರೆಗಳು ನೈಜವಾಗಿದ್ದು, ಚುನಾವಣಾ ಸಿದ್ಧತೆಗಳಿಗೆ ಇದು ಪರಿಣಾಮ ಬೀರಿದೆ ಎಂದು ಎಸ್ಇಸಿ ನ್ಯಾಯಾಲಯಕ್ಕೆ ವಿವರಿಸಿದೆ. ಈ ಹಿಂದೆ ಜಿಬಿಎ ಕೂಡ ಸರ್ಕಾರಕ್ಕೆ ಪತ್ರ ಬರೆದು, ವಿಶೇಷ ತೀವ್ರ ಪರಿಷ್ಕರಣೆ, ಮನೆ ಪಟ್ಟಿ ಸಮೀಕ್ಷೆ ಮತ್ತು ಜನಗಣತಿ ಕಾರ್ಯಗಳಿಂದಾಗಿ ಸಿಬ್ಬಂದಿ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿತ್ತು.

ಸುಪ್ರೀಂ ಕೋರ್ಟ್ ಈ ಹಿಂದೆ ಜೂನ್ ತಿಂಗಳೊಳಗೆ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ಅದೇ ವೇಳೆ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಷಿ, ಯಾವುದೇ ವಿಳಂಬವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿ, ಜೂನ್ 14ರಿಂದ 24ರ ನಡುವೆ ಚುನಾವಣೆ ನಡೆಸುವ ಸಾಧ್ಯತೆ ಕುರಿತು ಜಿಬಿಎಗೆ ಏಳು ದಿನಗಳ ಗಡುವು ನೀಡಿದ್ದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಮಹಾಲಕ್ಷ್ಮಿ ಲೇಔಟ್‌ನ ಮಾಜಿ ಕಾರ್ಪೊರೇಟರ್ ಎಂ. ಶಿವರಾಜು, ಸರ್ಕಾರ ಈಗ ಎಸ್‌ಐಆರ್, ಜನಗಣತಿ ಮತ್ತು ಸಿಬ್ಬಂದಿ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಸೆಪ್ಟೆಂಬರ್ ವರೆಗೆ ಸಮಯ ಕೇಳುತ್ತಿದೆ ಎಂದು ಟೀಕಿಸಿದರು. ಆದರೆ ಅಂತಿಮ ತೀರ್ಮಾನ ಸುಪ್ರೀಂ ಕೋರ್ಟ್‌ನ ವಿವೇಚನೆಗೆ ಸೇರಿದ್ದು, ನ್ಯಾಯಾಲಯ ಆದೇಶಿಸಿದರೆ ಮುಂದಿನ ಹತ್ತು ದಿನಗಳಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆಯೂ ಇದೆ ಎಂದರು.

ಇನ್ನೊಂದೆಡೆ, ರಸ್ತೆ, ಪಾದಚಾರಿ ಮಾರ್ಗ ಮತ್ತು ಇತರೆ ಮೂಲಸೌಕರ್ಯ ಕಾಮಗಾರಿಗಳು ನಗರದಲ್ಲಿ ನಡೆಯುತ್ತಿದ್ದು, ಅವು ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಸರ್ಕಾರದ ವಲಯಗಳು ತಿಳಿಸಿವೆ. ಚುನಾವಣೆಗೆ ಮುನ್ನ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಆಸಕ್ತಿ ತೋರಿಸುತ್ತಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಚುನಾವಣಾ ಸಿದ್ಧತೆ ಕುರಿತು ಮುಖ್ಯಮಂತ್ರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಇತರ ನಾಯಕರೊಂದಿಗೆ ಚರ್ಚೆ ನಡೆದಿದೆ ಎಂದು ಹೇಳಿದರು. ಜನಗಣತಿ ಮತ್ತು ಎಸ್‌ಐಆರ್ ಕರ್ತವ್ಯಗಳಲ್ಲಿ ಸಿಬ್ಬಂದಿ ನಿರತರಾಗಿರುವುದರಿಂದ ಚುನಾವಣಾ ವ್ಯವಸ್ಥೆ ಕಲ್ಪಿಸುವುದು ಸವಾಲಾಗಿದೆ. ಆದರೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular