Saturday, February 14, 2026
Google search engine

Homeರಾಜ್ಯಕುಣಿಗಲ್‌ ಗೆ ಶಿಫ್ಟ್ ಆಗಲಿದೆ ಬೆಂಗಳೂರು ರೇಸ್ ಕೋರ್ಸ್

ಕುಣಿಗಲ್‌ ಗೆ ಶಿಫ್ಟ್ ಆಗಲಿದೆ ಬೆಂಗಳೂರು ರೇಸ್ ಕೋರ್ಸ್

ಬೆಂಗಳೂರು : ದಶಕಗಳ ಇತಿಹಾಸವಿರುವ ಬೆಂಗಳೂರು ಟರ್ಫ್ ಕ್ಲಬ್ ಅಥವಾ ರೇಸ್ ಕೋರ್ಸ್ನ್ನು ರಾಜಧಾನಿಯಿಂದ ಹೊರಹಾಕಲು ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ರೇಸ್ ಕೋರ್ಸ್ ನ್ನು ತುಮಕೂರು ಜಿಲ್ಲೆಯ ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸಲು ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟದ ನಿರ್ಧಾರದ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ರೇಸ್ ಕೋರ್ಸ್ ಸ್ಥಳಾಂತರದ ಹಿಂದೆ ಹಲವು ತಾಂತ್ರಿಕ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿವೆ ಎಂದು ತಿಳಿಸಿದರು.

ಬಾಡಿಗೆ ಪರಿಷ್ಕರಣೆ ವಿಳಂಬ

2010ರ ಜನವರಿ 1ರಿಂದ ಟರ್ಫ್ ಕ್ಲಬ್‌ನ ಬಾಡಿಗೆಯನ್ನು ಪರಿಷ್ಕರಿಸಲಾಗಿರಲಿಲ್ಲ. ಈ ಕುರಿತು ಆಡಿಟ್ ವರದಿಗಳಲ್ಲಿ ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆ

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಈ ಹಿಂದೆಯೇ ರೇಸ್ ಕೋರ್ಸ್ ಅನ್ನು ನಗರದ ಹೃದಯಭಾಗದಿಂದ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಬಾಕಿ ಪಾವತಿ

2010ರಿಂದ ಸ್ಥಳಾಂತರವಾಗುವವರೆಗಿನ ಅವಧಿಗೆ, ಟರ್ಫ್ ಕ್ಲಬ್ ತನ್ನ ವಾರ್ಷಿಕ ಆದಾಯದ ಶೇಕಡಾ 2ರಷ್ಟನ್ನು ಲೋಕೋಪಯೋಗಿ ಇಲಾಖೆಗೆ ಪಾವತಿಸಬೇಕು ಎಂದು ಸಂಪುಟ ಕಡ್ಡಾಯಗೊಳಿಸಿದೆ.

ಬೆಂಗಳೂರು ಟರ್ಫ್ ಕ್ಲಬ್‌ಗೆ ಪರ್ಯಾಯವಾಗಿ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿರುವ ಐತಿಹಾಸಿಕ ಸ್ಟಡ್ ಫಾರ್ಮ್‌ನಲ್ಲಿ 110 ಎಕರೆ ಜಮೀನನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದ್ದು, ಎಷ್ಟು ಕಾಲಮಿತಿಯೊಳಗೆ ಕ್ಲಬ್ ನ್ನು ಪೂರ್ಣವಾಗಿ ಶಿಫ್ಟ್ ಮಾಡಬೇಕು ಎಂಬ ಗಡುವನ್ನು ಅದರಲ್ಲಿ ಉಲ್ಲೇಖಿಸಲಾಗುತ್ತದೆ.

ರೇಸ್ ಕೋರ್ಸ್ ಸ್ಥಳಾಂತರಗೊಂಡ ನಂತರ ಬೆಂಗಳೂರಿನ ಆ ಬೃಹತ್ ಜಾಗವನ್ನು ಸರ್ಕಾರ ತನ್ನ ವಶದಲ್ಲೇ ಉಳಿಸಿಕೊಳ್ಳಲಿದೆ.

ಪಾರಂಪರಿಕ ರಕ್ಷಣೆ

ಟರ್ಫ್ ಕ್ಲಬ್ ಹೊಂದಿರುವ ಐತಿಹಾಸಿಕ ಕಟ್ಟಡಗಳು ಮತ್ತು ಕ್ಲಬ್ ಹೌಸ್‌ಗಳನ್ನು ‘ಪಾರಂಪರಿಕ ಕಟ್ಟಡಗಳು’ ಎಂದು ಸಂರಕ್ಷಿಸಲಾಗುವುದು.

ಲಂಗ್ ಸ್ಪೇಸ್ (ಹಸಿರು ವಲಯ)

ನಗರದ ಮಧ್ಯಭಾಗದಲ್ಲಿ ಹಸಿರು ಉಳಿಸುವ ನಿಟ್ಟಿನಲ್ಲಿ ಈ ಜಾಗವನ್ನು ‘ಲಂಗ್ ಸ್ಪೇಸ್’ ಆಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ನಾಲ್ಕು ಎಕರೆಯಲ್ಲಿರುವ ಮೂಲ ಕಟ್ಟಡಗಳನ್ನು ಮಾತ್ರ ಟರ್ಫ್ ಕ್ಲಬ್ ನಿರ್ವಹಣೆಗೆ ಬಿಟ್ಟುಕೊಡಲಾಗುವುದು.

ಈ ನಿರ್ಧಾರವು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ನಗರದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಪೂರಕವಾಗಲಿದೆ ಎಂದು ಸರ್ಕಾರ ಆಶಿಸಿದೆ.

RELATED ARTICLES
- Advertisment -
Google search engine

Most Popular