ವಿಜಯಪುರ : ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದರೋಡೆಕೋರರು ಬಳಸಿದ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿದೆ.
ನಿನ್ನೆ ಸಂಜೆ ಮುಸುಕುದಾರಿ ದರೋಡೆಕೋರರು ಬ್ಯಾಂಕ್ ಸಿಬ್ಬಂದಿಗೆ ನಾಡ ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ಬ್ಯಾಂಕ್ ದರೋಡೆ ಮಾಡಿ ಅಲ್ಲಿಂದ ಇಕೋ ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಇದೀಗ ಈ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿದೆ. ದರೋಡೆ ಮಾಡಿ ಕಾರಿನಲ್ಲಿ ಎಸ್ಕೇಪ್ ಆಗುತ್ತಿರುವ ವೇಳೆ ಸೊಲ್ಲಾಪುರದಲ್ಲಿ ಬೈಕ್ ವೊಂದಕ್ಕೆ ಕಾರು ಡಿಕ್ಕಿಯಾಗಿದೆ. ಕೂಡಲೇ ಇದನ್ನು ಗಮನಿಸಿದ ಗ್ರಾಮಸ್ಥರು, ಸ್ಥಳೀಯರು ಕಾರಿನಲ್ಲಿದ್ದ ಖದೀಮರು ಹಿಡಿಯಲು ಮುಂದಾಗಿದ್ದಾರೆ.
ಇದರಿಂದ ಹೆದರಿದ ದುಷ್ಕರ್ಮಿಗಳು ಕೂಡಲೇ ತಮ್ಮ ಬಳಿಯಿದ್ದ ಪಿಸ್ತೂಲ್ ಹಾಗೂ ಮಾರಕಾಸ್ತ್ರವನ್ನು ತೋರಿಸಿ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಕಾರಿನಲ್ಲೇ ಸ್ವಲ್ಪ ಚಿನ್ನಾಭರಣಗಳನ್ನು ಬಿಟ್ಟು ಹೋಗಿದ್ದಾರೆ ಎಂದು ವಿಜಯಪುರ ಪೊಲೀಸರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಜಾನೆಯಲ್ಲಿದ್ದ ₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇನ್ಫಿಯಾ ಶಾಖೆಯಲ್ಲಿ ಈ ದರೋಡೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಇನ್ನೇನು ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧವಾಗುತ್ತಿದ್ದ ವೇಳೆ ಸುಮಾರು 7-8 ಮಂದಿ ಮುಸುಕುಧಾರಿಗಳು ಬ್ಯಾಂಕ್ ಒಳನುಗ್ಗಿದ್ದಾರೆ.
ಹೀಗೆ ದರೋಡೆ ಮಾಡಿದ ಹಣ ಮತ್ತು ಚಿನ್ನವನ್ನು ಬ್ಯಾಂಕ್ ಬಳಿಯೇ ನಿಲ್ಲಿಸಿದ್ದ ತಮ್ಮ ವಾಹನಗಳಲ್ಲಿ ತುಂಬಿಸಿಕೊಂಡು ದರೋಡೆಕೋರರು ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದೀಗ ದರೋಡೆಗೆ ಬಳಸಿದ KA 24 DH 2456 ಸಂಖ್ಯೆಯ ವಾಹನ ಸೊಲ್ಲಾಪುರದಲ್ಲಿ ಪತ್ತೆಯಾಗಿದೆ.