ಮೈಸೂರು : ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕುರಿತಂತೆ ವಿಪಕ್ಷ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಕೂಡ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಪ್ರಶ್ನೆಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ನಾಳೆ ಬೆಳಿಗ್ಗೆ 10 ಗಂಟೆಗೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲಿದ್ದಾರೆ.
ವಿಶ್ವದ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2025 ನವರಾತ್ರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಡದೇವಿ ಚಾಮುಂಡಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಸೋಮವಾರದಿಂದ ಅಂದರೆ ನಾಳೆಯಿಂದ ರತ್ನ ಖಚಿತ ಸಿಂಹಾಸನವೇರಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಅರಮನೆಯ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣಧಾರಣೆ ನಡೆಯಲಿದ್ದು, ಬೆಳಗ್ಗೆ 11.35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಂಗಳವಾದ್ಯದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಸವಾರಿ ತೊಟ್ಟಿಯ ಬಳಿ ಪಟ್ಟದ ಆನೆ, ಕುದುರೆ, ಹಸು ಜೊತೆ ಮಹಿಳೆಯರು ಕಳಸ ಹೊತ್ತು ತಂದು ಪೂಜೆ ನೆರವೇರಿಸಲಾಗುತ್ತದೆ. ಸೆ.22ರಿಂದ 29ರ ವರೆಗೆ ಖಾಸಗಿ ದರ್ಬಾರ್ ಜರುಗಲಿದೆ.
ಸೆ.29ರಂದು ಬೆಳಗ್ಗೆ 10.10ರಿಂದ 10.30ರ ಒಳಗೆ ಯದುವೀರ್ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಅಂದು ರಾತ್ರಿಯೇ ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ. ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನಡೆಯಲಿದೆ. ಆಯುಧ ಪೂಜೆಯ ದಿನದಂದು ಬೆಳಗ್ಗೆ 6 ಗಂಟೆಗೆ ಚಂಡಿಹೋಮ ಆರಂಭವಾಗಲಿದೆ. ಬೆಳಗ್ಗೆ 7.30 ರಿಂದ 7.42ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸಗಿ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಗುತ್ತದೆ.