ಬೈಂದೂರು:ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಕ್ಕ ಗೆದ್ದರೆ ಸಂವಿಧಾನ, ನಾರಾಯಣ ಗುರುಗಳ ವಿಚಾರಧಾರೆ, ಚಿಂತನೆಗಳು ಗೆದ್ದಂತೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿಂತಕರೂ ಆದ ನಿಖೇತ್ ರಾಜ್ ಮೌರ್ಯ ಹೇಳಿದರು.
ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಇಂದು ಮಂಗಳವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ ಸಾತಯಾಚನೆ ಸಭೆ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಲ್ಲಿ ಬಸವಣ್ಣ ಹಾಗೂ ಕುವೆಂಪುರವರ ತತ್ವ ಸಿದ್ಧಾಂತಗಳನ್ನು ಜಾಗೃತಗೊಳಿಸಬೇಕಿದೆ. ಅದ್ದರಿಂದ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಶಿಕಾರಿಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರು ಇದ್ದಾರೆ. ಆದರೆ, ಈ ರೈತರಿಗೆ ನ್ಯಾಯ ಒದಗಿಸಿಕೊಡಲು ಬಿಜೆಪಿ ಸರ್ಕಾರದಿಂದ ಆಗಿಲ್ಲ. ಇಲ್ಲಿ, ವಿದೇಶದಿಂದ ಅಡಿಕೆ ಆಮದಿಗೆ ಬಿಜೆಪಿ ಮುಂದಾಗಿದೆ. ಬೂತಾನ್ ಅಡಿಕೆಗೆ ಮಣೆ ಹಾಕಲಾಗಿದೆ. ಇದರಿಂದ, ರೈತರ ಅಡಿಕೆ ತೋಟಗಳು ಅವನತಿಯ ಹಂತ ತಲುಪಲಿವೆ ಎಂದರು. ದೇಶದಲ್ಲಿ ಬಿಜೆಪಿ ೪೦೦ ಸ್ಥಾನ ಪಡೆದರೆ, ಸಂವಿಧಾನ ತಿದ್ದುಪಡಿ ಮಾಡುವುದಾಗಿ ಹೇಳುತ್ತಿದ್ದಾರೆ. ನೆನಪಿರಲಿ, ಇದೇ ಸಂವಿಧಾನದಿಂದ ಬಡವರ ಮಕ್ಕಳು, ಕೂಲಿಕಾರ್ಮಿಕರ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಅವಕಾಶ ಕಲ್ಪಿಸಿರುವುದು. ಆದರೆ, ಬಿಜೆಪಿಯವರು ಇಂತಹ ಸಂವಿಧಾನವನ್ನು ಅಳಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಕೂಡದು ಎಂದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಅಳಲು ಆಲಿಸಲು ಸರ್ಕಾರದ ವ್ಯವಸ್ಥೆ ಇರುವುದು. ಆದರೆ, ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ಜಾತಿ- ಧರ್ಮಗಳ ನಡುವೆ ಬಿರುಕು ಮೂಡಿಸುತ್ತಿದೆ. ಸಮುದಾಯಗಳ ನಡುವೆ ಭೇದ- ಬಾವ ಮೂಡಿಸಿ, ಮಾನವ ಹಕ್ಕಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದರು. ಕೆಳಗೆ ಬಿದ್ದವರನ್ನು ಕೈ ಹಿಡಿದು ಮೇಲೆತ್ತುವ ಕಾರ್ಯ ಆಗಬೇಕು. ಇದು ನಿಜವಾದ ಭಾರತದ ಕಲ್ಪನೆ. ಆದರೆ, ಪ್ರಸ್ತುತ ಬಿಜೆಪಿ ಆಡಳಿತದಿಂದ ಕೆಳಗೆ ಬಿದ್ದವರು ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯವರ ಎಂದು ನೋಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲ್ಲದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಹೆಣ್ಣುಮಕ್ಕಳಿಗೆ ಸಮಾನತೆ ದೊರಕಿಸಿಕೊಡಲು ಸಾಧ್ಯ. ಬೆಲೆ ಏರಿಕೆಯ ಪರಿಸ್ಥಿತಿ ನಿಭಾಯಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರವನ್ನು ಜನ ಸಾಮಾನ್ಯರು ನಂಬಕೂಡದು. ಕ್ಷೇತ್ರದ ರಕ್ಷಣೆಗೆ ನನಗೆ ಮತ ನೀಡಿ ಎಂದು ಕೋರಿದರು.