Friday, January 23, 2026
Google search engine

Homeರಾಜ್ಯಜೈವಿಕ ಉದ್ಯಾನಕ್ಕೆ ಬಸವಣ್ಣನವರ ಹೆಸರು : ಈಶ್ವರ ಖಂಡ್ರೆ ನಡೆಗೆ ಸಿದ್ದಗಂಗಾ ಶ್ರೀಗಳ ಶ್ಲಾಘನೆ

ಜೈವಿಕ ಉದ್ಯಾನಕ್ಕೆ ಬಸವಣ್ಣನವರ ಹೆಸರು : ಈಶ್ವರ ಖಂಡ್ರೆ ನಡೆಗೆ ಸಿದ್ದಗಂಗಾ ಶ್ರೀಗಳ ಶ್ಲಾಘನೆ

ತುಮಕೂರು : ಒಂದೂವರೆ ಶತಮಾನದ ಬಳಿಕ ಬೆಂಗಳೂರಿನಲ್ಲಿ ಬೃಹತ್‌ ಉದ್ಯಾನ ನಿರ್ಮಿಸಿ ಅದಕ್ಕೆ ವಿಶ್ವಗುರು ಬಸವಣ್ಣ ಜೈವಿಕ ಉದ್ಯಾನ ಎಂದು ಹೆಸರಿಡಲು ಸಂಪುಟದ ಅನುಮೋದನೆ ಪಡೆದಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಶ್ಲಾಘಿಸಿದ್ದಾರೆ.

ಇನ್ನೂ ಈ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಶ್ರೀ ಮಠಕ್ಕೆ ಭೇಟಿ ನೀಡಿದ ಈಶ್ವರ್‌ ಖಂಡ್ರೆ ಅವರೊಂದಿಗೆ ಔಪಚಾರಿಕವಾಗಿ ಮಾತನಾಡಿದ ಶ್ರೀಗಳು, ಬೃಹತ್‌ ಉದ್ಯಾನ ನಿರ್ಮಾಣ ಶತಮಾನದ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಣ್ಣನವರನ್ನು ರಾಜ್ಯ ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಈಗ ಲಾಲ್‌ ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ ಬಳಿಕ ಬೆಂಗಳೂರು ಉತ್ತರ ತಾಲೂಕಿನಲ್ಲಿ ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಬೃಹತ್‌ ಉದ್ಯಾನಕ್ಕೆ ವಿಶ್ವಗುರು ಬಸವಣ್ಣ ಜೈವಿಕ ಉದ್ಯಾನ ಎಂದು ಹೆಸರಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳೂ ಒಮತದಿಂದ ಬೆಂಬಲ ನೀಡಿದರು ಎಂದು ಖಂಡ್ರೆ ವಿವರಿಸಿದರು.

ಇನ್ನೂ ಸಚಿವ ಸಂಪುಟ ಮೊದಲ ಹಂತದ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ 50 ಕೋಟಿ ರೂ. ಹಂಚಿಕೆ ಮಾಡಲು ಸಮತಿಸಿದ್ದು, ಸಿ.ಎಸ್‌‍.ಆರ್‌. ನೆರವು ಪಡೆದು 2 ವರ್ಷದೊಳಗೆ ಉದ್ಯಾನ ಅಭಿವೃದ್ಧಿಪಡಿಸಿ ಉದ್ಘಾಟನೆ ಮಾಡಲಾಗುವುದು ಎಂದೂ ತಿಳಿಸಿದರು.

ಸತಿವನ ನಿರ್ಮಾಣ: ಅಭಿನಂದನೆ: ಸಿದ್ದಗಂಗಾಮಠದ ಆವರಣದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ಅಧ್ಯಾತಿಕ ಶಕ್ತಿ, ಸಮಾಜಸೇವೆ ಮತ್ತು ದಾರ್ಶನಿಕತೆಯ ಪ್ರತೀಕವಾಗಿ ಅರಣ್ಯ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಸತಿವನಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಇದರ ನಿರ್ಮಾಣಕ್ಕೆ ಸಹಕರಿಸಿದ ಈಶ್ವರ ಖಂಡ್ರೆ ಅವರಿಗೆ ಸ್ವಾಮೀಜಿಯವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular