ಬೆಂಗಳೂರು : ಕೋಗಿಲು ಲೇಔಟ್ನಲ್ಲಿ ನಡೆದ ಸರ್ಕಾರದ ಅಕ್ರಮ ಭೂಮಿ ಒತ್ತುವರಿ ಮಾಡಿದ್ದವರಿಗೆ ಬಿಗ್ ಶಾಕ್ ನೀಡಿದ ಬೆನ್ನಲ್ಲೇ ಇದೀಗ ನಾಗವಾರದಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ನಾಗವಾರದ ಥಣಿಸಂದ್ರ ಬಳಿಯ ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ ಸೇರಿದ ಸರ್ವೆ ಸಂಬರ್ 28 ರ 2 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಜಾಗದಲ್ಲಿದ್ದ 30ಕ್ಕೂ ಹೆಚ್ಚು ಮನೆ, ಶೆಡ್ ಹಾಗೂ ಗ್ಯಾರೇಜ್ಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕೆಡವಲಾಗಿದೆ.
ಇನ್ನೂ ಈ ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯ ನಿವಾಸಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಸುಮಾರು 20 ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿರುವುದಾಗಿ ಹೇಳುತ್ತಿರುವ ನಿರಾಶ್ರಿತರು ಅಗತ್ಯ ದಾಖಲೆಗಳನ್ನ ಹೊಂದಿದ್ದರೂ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೇ ಅಮಾನವೀಯತೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ನಿಯಮಾನುಸಾರ ಮತ್ತು ಕೋರ್ಟ್ ಆದೇಶನಕ್ಕನುಗುಣವಾಗಿಯೇ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಮೇಲ್ನೋಟಕ್ಕೆ ಕೋಗಿಲು ಲೇಔಟ್ ರೀತಿಯಲ್ಲಿಯೇ ಸರ್ಕಾರಿ ಜಾಗವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗಿರುವ ಆರೋಪಗಳೂ ಕೇಳಿಬರುತ್ತಿದ್ದು, ಇದು ಸರ್ಕಾರಿ ಜಾಗ ಎಂಬುದು ಗೊತ್ತಿದ್ದರೂ ಒಂದಷ್ಟು ಮಂದಿಗೆ ಇ ಖಾತಾ, ರಿಜಿಸ್ಟ್ರೇಷನ್ ಪತ್ರಗಳನ್ನು ಮಾಡಿಕೊಟ್ಟವರು ಯಾರು? ಇಷ್ಟು ಮನೆಗಳು ತಲೆ ಎತ್ತುವ ತನಕ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ವಿಚಾರವೂ ಸದ್ಯ ತಲೆದೂಡಿದೆ.



