Wednesday, November 5, 2025
Google search engine

Homeರಾಜ್ಯಸುದ್ದಿಜಾಲಅಲಂಕಾರದಿಂದ ಕಂಗೊಳಿಸಿದ ಬೆಳಗಾವಿ ಕುಂದಾನಗರಿ…

ಅಲಂಕಾರದಿಂದ ಕಂಗೊಳಿಸಿದ ಬೆಳಗಾವಿ ಕುಂದಾನಗರಿ…

ವರದಿ :ಸ್ಟೀಫನ್ ಜೇಮ್ಸ್

ಬೆಳಕಿನ‌ ಹಬ್ಬ ದೀಪಾವಳಿ ಖರೀದಿಗೆ ಮೇರೆ ಮೀರಿದ ಜನಜಂಗುಳಿ..!

ಬೆಳಗಾವಿ : ಬೆಳಕಿನ ಹಬ್ಬ ದೀಪಾವಳಿಯ ಖರೀದಿ ಭರಾಟೆ ಬೆಳಗಾವಿ ನಗರದಲ್ಲಿ ಮೇರೆ ಮೀರಿತು.
ದೀಪಾವಳಿ ಆರಂಭದ ಧಾಂತೆರಸ ಹಬ್ಬದ ಹಿನ್ನೆಲೆಯಲ್ಲಿ ನಗರದ ಮುಖ್ಯ ಮಾರುಕಟ್ಟೆ ಪ್ರದೇಶಗಳಾದ ಖಡೇಬಜಾರ, ಮಾರುತಿ ಗಲ್ಲಿ, ಗಣಪತಿಗಲ್ಲಿ, ಪಾಂಗುಳುಗಲ್ಲಿ, ಬಾಪಟಗಲ್ಲಿ, ರಾಮದೇವಗಲ್ಲಿ, ರವಿವಾರ ಪೇಟ, ಶನಿವಾರ ಖೂಟ ಪ್ರದೇಶಗಳಲ್ಲಿ ಜನರಿಂದ ಮಾರುಕಟ್ಟೆ ತುಂಬಿಹೋಗಿತ್ತು.
ಈ ವರ್ಷದ ಉತ್ತಮ‌ ಮಳೆ ಮತ್ತು ಕೈಸೇರುವ ಸಮೃದ್ಧ ಬೆಳೆಯ ಹಿನ್ನಲೆಯಲ್ಲಿ ಜನತೆ ಈ ವರ್ಷದ ದೀಪಾವಳಿಯನ್ನು ತುಂಬು ಸಡಗರ ಸಂಭ್ರಮದಿಂದ ಆಚರಿಸುವ ಗೋಚರ ತುಂಬಿದ ಮಾರುಕಟ್ಟೆಯಲ್ಲಿ ಕಂಡುಬಂತು.
ಹೂವು, ಹಣ್ಣು, ತರಕಾರಿ, ಬಟ್ಟೆಬರೆ, ರಂಗೋಲಿ, ಕಾರ್ತಿಕ ಬುಟ್ಟಿ, ದೀಪಾಲಂಕಾರದ ಸಾಮಗ್ರಿಗಳ, ಹಣತೆ, ಪಣತೆ, ಮಣ್ಣಿನ ಆಕೃತಿಗಳು, ಎಲೆಕ್ಟ್ರಿಕ್, ಬಲ್ಬ್ ಸರಗಳು, ಪಟಾಕಿ, ತಳಿರು ತೋರಣ ಸೇರಿದಂತೆ ದೀಪಾಲಂಕಾರ, ಪರಾಳ ಖಾದ್ಯ, ಪೂಜಾ ಸಾಮಗ್ರಿ ಹಾಗೂ ಜವಳಿ ಖರೀದಿ ತೀವ್ರತೆ ಪಡೆದಿತ್ತು.
ಬೆಳಗಾವಿ ನಗರವೂ ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳ ಮಧ್ಯದ ಸಂಗಮ ಹಾಗೂ ಪ್ರಮುಖ ವಾಣಿಜ್ಯ ನಗರಿಯಾಗಿರುವುದರಿಂದ ಗೋವಾ ರಾಜ್ಯ, ದಕ್ಷಿಣ ಮಹಾರಾಷ್ಟ್ರದ ಸಾವಂತವಾಡಿ, ಸಿಂಧುದುರ್ಗ ಜಿಲ್ಲೆಗಳ ಜನತೆ ಹಾಗೂ ಹುಬ್ಬಳ್ಳಿ ಮಹಾನಗರ ಬಿಟ್ಟರೆ ಪರ್ಯಾಯ ದೊಡ್ಡ ಮಾರುಕಟ್ಟೆಯಾದ ಬೆಳಗಾವಿಗೆ ಉತ್ತರ ಕರ್ನಾಟಕ ಜಿಲ್ಲೆಗಳ ಜನತೆ ಖರೀದಿಗೆ ದಾಂಗುಡಿ ಇಟ್ಟಿದ್ದಾರೆ.
ಉತ್ತಮ ತರಕಾರಿ, ಹೈನೋದ್ಯಮ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಕರಕುಶಲ ಹಾಗೂ ಅಲಂಕಾರಿಕ‌ ವಸ್ತುಗಳು, ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹೆಸರಾಗಿರುವುದರಿಂದ ಸಹಜವಾಗಿ ಬೆಳಗಾವಿ ಮಾರುಕಟ್ಟೆ ಹಬ್ಬಹರಿದಿನಗಳ ಖರೀದಿಗೆ ಹೆಸರುವಾಸಿಯಾಗಿದೆ.
ಜನರ ಜೀವನದಲ್ಲಿ ಹೊಸತನ, ಚೈತನ್ಯ ಮೂಡಿಸುವ ದೀಪಗಳ ಹಬ್ಬ ದೀಪಾವಳಿ ಈ ಭಾರಿ ತುಸು ಹೆಚ್ಚು ಸಂಭ್ರಮದಿಂದ‌ ಆಚರಿಸಲ್ಪಡುತ್ತಿದೆ. ಸಹಜವಾಗಿ ಹೊಟೆಲ್, ಕ್ಯಾಂಟೀನ್, ವಸತಿ ಗೃಹಗಳಲ್ಲಿ ವ್ಯಾಪಾರ ವಹಿವಾಟು ಜೋರು ಪಡೆದಿದೆ.
ಬೆಳಗಾವಿ ನಗರದಾದ್ಯಂತ ವ್ಯಾಪಾರಿ ಸಂಘಟನೆಗಳು ದೀಪಾಲಂಕಾರ ಮಾಡಿರುವುದು ನಗರ ಬೀದಿಗಳಿಗೆ ವಿಶೇಷ‌ ಮೆರಗು ತಂದಿರುವುದು ಆಕರ್ಷಣೀಯ.
ದೀಪಾವಳಿ‌ ಹಬ್ಬದ ಪ್ರತೀಕವಾಗಿ ಅಳವಡಿಸುವ ಕಾರ್ತಿಕ ಬುಟ್ಟಿಗಳು ಹೊಸ ವಿನ್ಯಾಸದಿಂದ‌ ಈ ಭಾರಿ ಗಮನ ಸೆಳೆದಿವೆ. ಹಿಂದೂ ಸಾಮ್ರಾಟ ಶಿವಾಜಿ‌ ಮಹಾರಾಜರು, ವಿಶ್ವಗುರು ಬಸವಣ್ಣ, ಗೌತಮ ಬುದ್ಧ, ಕನಕದಾಸರು, ಸ್ವಾಮಿ ಸಮರ್ಥ, ಶ್ರೀ ಮಹಾಲಕ್ಷ್ಮೀ, ಪ್ರಥಮ‌ ವಂದಿತ ಶ್ರೀ ಗಣೇಶ, ಶಿವ ಪಾರ್ವತಿ ಸೇರಿದಂತೆ ಮಹಾಪುರುಷರು, ದೇವನಾದೇವತೆಗಳ ಭಾವಚಿತ್ರ ಬಳಸಿ ತಯಾರಿಸಿರುವ ಕಾರ್ತಿಕ ಬುಟ್ಟಿಗಳು ಗಮನ ಸೆಳೆದವು.
ಭಾನುವಾರ ಸಂಜೆಯವರೆಗೆ ದೀಪಾವಳಿ ಖರೀದಿ ಭರಾಟೆ ತೀವ್ರ ಹೆಚ್ಚಿತ್ತು, ಬೆಳಗಾವಿ‌ ಮಹಾನಗರ ಪಾಲಿಕೆ, ಹೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ, ನಗರ ಪೊಲೀಸರು ಬಂದೋಬಸ್ತ್ ಮತ್ತು ಸಂಚಾರ ಸುಗಮಗೊಳಿಸುವ ಜವಾಬ್ದಾರಿ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular