ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಗೋಕಾಕ ನಗರದಲ್ಲಿ ಜನರಿಗೆ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುತ್ತೇವೆಂದು ನಂಬಿಸಿ ಮೋಸ ಮಾಡುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೋಕಾಕ ನಗರದ ಶ್ರೀನಗರ ಪ್ರದೇಶದ ಹನುಮಾನ ಮಂದಿರದ ಹತ್ತಿರ ಇರುವ ಮನೆಯೊಂದರಲ್ಲಿ ಈ ಮೋಸದ ಚಟುವಟಿಕೆ ನಡೆಯುತ್ತಿತ್ತು. ಆರೋಪಿಗಳು ಜನರಿಗೆ “ಕೆಮಿಕಲ್ ಬಳಸಿ ಹಣ ಡಬ್ಲಿಂಗ್ ಮಾಡಿಕೊಡುತ್ತೇವೆ” ಎಂದು ನಂಬಿಸಿ ಅವರಿಂದ ಅಸಲಿ ಹಣವನ್ನು ಪಡೆದು, 500 ರೂಪಾಯಿ ನೋಟುಗಳ ಜೊತೆಗೆ ಕಪ್ಪು ಬಣ್ಣ ಹಚ್ಚಿದ ಖಾಲಿ ಹಾಳೆಗಳನ್ನು ಯಂತ್ರದಲ್ಲಿ ಬಿಸಿ ಮಾಡಿ ನಂತರ ಪೌಡರ್ ಬಳಸಿ ನೋಟು ತಯಾರಿಸುವಂತೆ ನಾಟಕ ಮಾಡುತ್ತಿದ್ದರು. ನಂತರ ಉಳಿದ ಹಾಳೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ತೊಳೆಯಿರಿ ಎಂದು ಹೇಳಿ ಅಸಲಿ ಹಣವನ್ನು ಕಸಿದುಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ ಎಂದರು.

ಪರಶುರಾಮ ಭೀಮಶಿ ಬಡಕರಿ, ಇಮಾನ ಬಾಬಾಜಾನ ಜುನೇದಿ, ಜಯಶ್ರೀ ಬಾಬು ಕಾಂಬಳೆ, ಮನೀಷಾ ರಾಜು ಗಾಯಕವಾಡ, ಉಜ್ವಲಾ ತುಳಸಿರಾಮ ಬಿಲಾನೆ, ಅನಂತ ಪ್ರಕಾಶ ನರವಾಡೆ ಹಾಗೂ ದಿಲದಾರ ರಬ್ಬಾನಿ ಶೇಖ ಸೇರಿದ್ದಾರೆ.ಪೊಲೀಸರು ಆರೋಪಿಗಳಿಂದ ಹಣ ಬಿಸಿ ಮಾಡುವ ಯಂತ್ರ, ಕಪ್ಪು ಬಣ್ಣದ ಬಾಟಲಿಗಳು, ಬಿಳಿ ಹಾಳೆಗಳಿರುವ ಬ್ಯಾಗ್, 8 ಮೊಬೈಲ್ ಫೋನ್‌ಗಳು ಹಾಗೂ ₹2,520 ನಗದು ವಶಪಡಿಸಿಕೊಂಡಿದ್ದಾರೆ ಎಂದರು.



