ಮಾಸ್ಕೋ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಿಬಿಯನ್ ಸಮುದ್ರದಲ್ಲಿ ವೆನುಜುವೆಲಾದ ಹಡುಗಗಳ ಮೇಲೆ ನಿರಂತರ ದಾಳಿ ನಡೆಸುತ್ತಾ, ಯುದ್ದದ ವಾತವರಣವನ್ನು ಸೃಷ್ಟಿಸುವ ಜೊತೆಗೆ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡೂರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಹಿನ್ನಲೆ ರಷ್ಯಾ ಹಾಗೂ ಬೆಲಾರೂಸ್ ವೆನುಜುವೆಲಾಗೆ ತಮ್ಮ ಬೆಂಬಲವನ್ನು ಸೂಚಿಸಿವೆ.
ರಷ್ಯಾ ಹಾಗೂ ಅಮೆರಿಕಾದ ನಡುವೆ ಈಗಾಗಲೇ ಸಾಕಷ್ಟು ಬಿಕ್ಕಟ್ಟಿನ ನಡುವೆಯೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೆನುಜುವೆಲಾ ಅಧ್ಯಕ್ಷ ಹಾಗೂ ಟ್ರಂಪ್ ಬದ್ದ ಶತ್ರು ಮಡೂರೂಗೆ ಕರೆ ಮಾಡಿ ಮಾತನಾಡುವ ಮೂಲಕ ಟ್ರಂಪ್ ನಲ್ಲಿ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ ಈ ಬಗ್ಗೆ ಗುರುವಾರ ನಿಕೋಲಸ್ ಮಡೂರೊಗೆ ವ್ಲಾಡಿಮಿರ್ ಪುಟಿನ್ ಕರೆಮಾಡಿ ಮಾತನಾಡಿದ್ದು, ಈ ವೇಳೆ ಅಮೆರಿಕಾದಿಂದ ಬಾಹ್ಯ ಒತ್ತಡ ಹೆಚ್ಚುತ್ತಿರುವ ಹಿನ್ನಲೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ನಿಕೋಲಸ್ ಮಡೂರೊ ಅವರ ಸರ್ಕಾರದ ನೀತಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಆಶ್ವಾಸನೆ ನೀಡದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇನ್ನೂ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಇಡೀ ಪಶ್ಚಿಮ ಗೋಳಾರ್ಧದಲ್ಲಿ ಅನಿರೀಕ್ಷಿತ ಪರಿಣಾಮಗಳನ್ನು ಬೀರುವ ಬೆದರಿಕೆ ಒಡ್ಡೂವಂತಹ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಮತ್ತಷ್ಟು ಇಳಿಯುವುದನ್ನು ತಡೆಯಲು ಶ್ವೇತಭವನವು ನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟ್ರಂಪ್ ಅವರು ಮಡೂರೊ ಅವರನ್ನು ಟಾರ್ಗೆಟ್ ಮಾಡುತ್ತಿದ್ದು, ಈಗಾಗಲೇ ಹಲವು ಬಾರಿ ಅವರನ್ನು ಬಂಧಿಸುವ ಮಾತುಗಳನ್ನಾಡಿದ್ದಾರೆ. ಇದರ ಜೊತೆಗೆ ವೆನುಜುವೆಲಾದ ಬೋಟ್ ಗಳಿಂದ ಅಮೆರಿಕಾದಲ್ಲಿ ಅಕ್ರಮವಾಗಿ ಡ್ರಗ್ಸ್ ತಂದು ಸುರಿದು ಇಲ್ಲಿನ ಜನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆರೆಬಿಯನ್ ಸಮುದ್ರದಲ್ಲಿನ ಪ್ರತಿದಿನವೂ ಬೋಟ್ ಗಳ ಮೇಲೆ ಟ್ರಂಪ್ ಮಿಲಿಟರಿ ದಾಳಿ ನಡೆಸುತ್ತಿದೆ. ಈ ಮೂಲಕ ಮಡೂರೊಗೆ ಟ್ರಂಪ್ ಹೆಚ್ಚಿಸುತ್ತಿರುವ ಒತ್ತಡದಿಂದಾಗಿ ನ.21 ರಂದು ಟ್ರಂಪ್ ಅವರೊಂದಿಗೆ ಮಾತನಾಡಿದ ಮಡೂರೊ, ತನಗೆ ಮತ್ತು ತನ್ನ ಕುಟುಂಬಕ್ಕೆ ಸಂಪೂರ್ಣ ಕಾನೂನು ಕ್ಷಮಾದಾನ ನೀಡಿದರೆ ವೆನೆಜುವೆಲಾವನ್ನು ತೊರೆಯಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಈ ಬೆನ್ನಲ್ಲೇ ಬೆಲಾರೂಸ್ ಸಹ ವೆನುಜುವೆಲಾಗೆ ಬೆಂಬಲವನ್ನು ಸೂಚಿಸಿದ್ದಾರೆ. ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ವೆನೆಜುವೆಲಾದಲ್ಲಿನ ರಷ್ಯಾದ ರಾಯಭಾರಿ ಜೀಸಸ್ ರಫೇಲ್ ಸಲಾಜಾರ್ ವೆಲಾಜ್ಕ್ವೆಜ್ ಕೇವಲ 17 ದಿನಗಳಲ್ಲೇ ತಮ್ಮ 2ನೇ ಸಭೆಯನ್ನು ನಡೆಸಿದ್ದು, ಬೆಲಾರೂಸ್ ಮಡೂರೊ ಅವರಿಗೆ ಯಾವಾಗಲೂ ಸ್ವಾಗತ ಕೋರುತ್ತದೆ. ಬಹುಶಃ ಈಗ ಅವರು ತನ್ನ ದೇಶ ತೊರೆದು ಬೆಲಾರೂಸ್ ಗೆ ಭೇಟಿ ನೀಡುವ ಸಮಯ ಬಂದಿದೆ ಎಂದ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಇನ್ನೂ ಈ ಸಂಘರ್ಷದಲ್ಲಿ ರಷ್ಯಾ ವೆನುಜುವೆಲಾಗೆ ಬೆಂಬಲ ನೀಡುವ ಮೂಲಕ ಅಮೆರಿಕಾವನ್ನು ಕೆರಳಿಸುವಂತಹ ಪ್ರಯತ್ನ ಮಾಡಿದ್ದು, ಇದು ರಷ್ಯಾ ಹಾಗೂ ಉಕ್ರೇನ್ ನಡುವಿನ ಶಾಂತಿ ಮಾತುಕತೆಯ ಮೇಲೆ ಹಾಗೂ ಅಮೆರಿಕಾದ ಜೊತೆಗೆ ರಷ್ಯಾದ ಕಹಿ-ಸಿಹಿ ಸಂಬಂಧದ ಮೇಲೆ ಯಾವ ಪರಿಣಾಮ ಬೀಳಲಿದ್ದು, ಈ ಕುರಿತು ಟ್ರಂಪ್ ಪ್ರತಿಕ್ರಿಯೆ ಏನಾಗಿರುತ್ತದೆ ಎಂದು ಕಾದು ನೋಡಬೇಕಿದೆ ಎನ್ನಲಾಗಿದೆ.



