Wednesday, September 10, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಸಚಿವ ಜಾರಕಿಹೊಳಿ ಬೆಂಬಲಿಸಿದಕ್ಕೆ ಗಂಡನ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದ...

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಸಚಿವ ಜಾರಕಿಹೊಳಿ ಬೆಂಬಲಿಸಿದಕ್ಕೆ ಗಂಡನ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದ ಮಹಿಳೆ!

ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸಹಕಾರಿ ರಂಗದ ಹಿಡಿತ ಸಾಧಿಸಲು ಜಾರಕಿಹೊಳಿ ಮತ್ತು ಕತ್ತಿ ಕುಟುಂಬದ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಅದರಲ್ಲೂ ಹುಕ್ಕೇರಿ ಮತಕ್ಷೇತ್ರದಲ್ಲಿ ಪಿಕೆಪಿಎಸ್ ಚುನಾವಣೆ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆ ಎರಡು ಮನೆತನದ ನಡುವೆ ವೈಯಕ್ತಿಕ ಜಿದ್ದಿಗೆ ಬಿದ್ದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಎದುರೇ ಮಹಿಳೆಯೊಬ್ಬರು ಗಂಡನ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು ಎಳೆದಾಡಿದ ಘಟನೆ ನಡೆದಿದೆ.

ಸಚಿವ ಸತೀಶ್ ಜಾರಕಿಹೊಳಿಯನ್ನು (Satish Jarkiholi) ಬೆಂಬಲಿಸಿದ್ದಕ್ಕೆ ಗಂಡನ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು ಎಳೆದಾಡುತ್ತಿರುವ ಮಹಿಳೆ, ಮಧ್ಯದಲ್ಲಿ ಸಿಕ್ಕು ದಿಕ್ಕೇ ತೋಚದಂತಾಗಿ ನಿಂತ ಸಚಿವರು. ಎರಡು ಗುಂಪುಗಳಿಂದ ಪರಸ್ಪರ ಪರ-ವಿರುದ್ದ ಘೋಷಣೆ, ಪೊಲೀಸರಿಂದ ಪರಿಸ್ಥಿತಿ ಹತೋಟೆಗೆ ತರಲು ಹರಸಾಹಸ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ.

ಸೋಮವಾರ ಮಧ್ಯಾಹ್ನ ಈ ಗ್ರಾಮದಲ್ಲಿ ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮೇಲಾಗಿ ದೊಡ್ಡವರೇ ಇಲ್ಲಿ ತೊಡೆ ತಟ್ಟಿ ಅಖಾಡಕ್ಕೆ ನಿಂತಿದ್ದು ಇಡೀ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿದೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದ್ದು, ಹೀಗಾಗಿ ಈ ಗ್ರಾಮದ ಪಿಕೆಪಿಎಸ್ ಸದಸ್ಯರು ಸೇರಿಕೊಂಡು ಒಬ್ಬರಿಗೆ ಮತದಾನ ಮಾಡುವ ಹಕ್ಕು ನೀಡುತ್ತಾರೆ. ಅದಕ್ಕಾಗಿ ಸೋಮವಾರ ಸಭೆ ಕೂಡ ಸೇರಲಾಗಿತ್ತು. ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಒಂದು ವಾರದಿಂದ ನಾಪತ್ತೆಯಾದವರು ದಿಢೀರ್ ಸಭೆಗೆ ಆಗಮಿಸಿದ್ದಾರೆ.

ಸಭೆ ಇರುವ ಕಾರಣ ಪಿಕೆಪಿಎಸ್​ಗೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಆಗಮಿಸಿದ್ದರು. ಇದೇ ವೇಳೆ ಮಾರುತಿ ಪತ್ನಿ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಗಂಡ ವಾರದಿಂದ ಸಂಪರ್ಕಕ್ಕೆ ಸಿಗದಿದ್ದ ಹಿನ್ನೆಲೆ ಆಕ್ರೋಶಗೊಂಡು ಬಂದಾಕೆ ಆತನ ಕೊರಳು ಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿ ಎಳೆದಾಡಿದ್ದಾರೆ. ಸಚಿವರ ಮುಂದೆಯೇ ಗಂಡ ಹೆಂಡತಿ ಹೈಡ್ರಾಮಾ ನಡೆಯುತ್ತಿದ್ದರೆ, ಇವರ ಜಗಳ ಬಿಡಿಸಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಸುಸ್ತಾಗಿ ಹೋದರು. ತಕ್ಷಣ ಇಬ್ಬರ ಜಗಳ ಬಿಡಿಸಿ ಮಾರುತಿ ಸನದಿಯನ್ನು ಮತ್ತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ತಮ್ಮೊಟ್ಟಿಗೆ ಕರೆದುಕೊಂಡು ಹೋದರು. ಇತ್ತ ಸ್ಥಳಕ್ಕೆ ಬಂದ ಮಾಜಿ ಸಂಸದ ರಮೇಶ್ ಕತ್ತಿ ನೇರವಾಗಿ ಸತೀಶ್ ಜಾರಕಿಹೊಳಿ ಹಾಗೂ ತಂಡಕ್ಕೆ ಸವಾಲು ಹಾಕಿದರು. ತಮ್ಮ ರಾಜಕೀಯ ಇತಿಹಾಸ ಯಾವಾಗಿನಿಂದ ಶುರು ಆಗಿದೆ ಎಂಬುದನ್ನು ಹೇಳುತ್ತಾ ಪೊಲೀಸರ ವಿರುದ್ದ ಕೂಡ ಅಸಮಾಧಾನ ಹೊರ ಹಾಕಿದರು. ಗಲಾಟೆ ಶುರುವಾಗುತ್ತಿದ್ದಂತೆ ಪಿಕೆಪಿಎಸ್ ಒಳ ಹೋದ ಸತೀಶ್ ಜಾರಕಿಹೊಳಿ ಕೆಲವೇ ಹೊತ್ತಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಲ್ಲಿಂದ ಹೊರ ನಡೆದರು. ಇದಾದ ಬಳಿಕ ಮಾಜಿ ಸಂಸದ ರಮೇಶ್ ಕತ್ತಿ ಪರ ಬೆಂಬಲಿಗರು ಕಚೇರಿಗೆ ಒಳಗೆ ಬಂದು ಅಲ್ಲಿದ್ದ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡರು. ಇತ್ತ ಹೊರಗಡೆ ಭಾಗದಲ್ಲಿ ಸತೀಶ್ ಹಾಗೂ ರಮೇಶ್ ಕತ್ತಿ ಬೆಂಬಲಿಗರು ಜಮಾವಣೆಗೊಂಡಿದ್ದು ಪರಸ್ಪರ ವಾಗ್ವಾದ ಕೂಡ ಮಾಡಿಕೊಂಡರು. ಒಬ್ಬರಿಗೊಬ್ಬರು ಎಳೆದಾಡುವ ಮಟ್ಟಿಗೆ ಹೋಗ್ತಿದ್ದಂತೆಯೇ ಪೊಲೀಸರು ಜಗಳ ಬಿಡಿಸಿ ಎರಡು ಗುಂಪಿನವರನ್ನು ಅಲ್ಲಿಂದ ಕಳುಹಿಸುವ ಕೆಲಸ ಮಾಡಿದ್ದಾರೆ.

ಇತ್ತ ಮಾರುತಿ ಸನದಿಯನ್ನು ಮತ್ತೆ ಕಿಡ್ಯಾಪ್ ಮಾಡಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪ ಮಾಡಿದ್ದು, ಇನ್ನೊಂದು ಕಡೆ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಯಿತು. ಇತ್ತ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಇದ್ದು, ಸದ್ಯ ಒಂದು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಒಂದು ಕಡೆ ಸತೀಶ್ ಜಾರಕಿಹೊಳಿ ಮುಂದೆ ಗಂಡ ಹೆಂಡತಿ ಜಗಳವಾಡಿಕೊಂಡರೆ, ಇನ್ನೊಂದು ಕಡೆ ಮಾಜಿ ಸಂಸದ ರಮೇಶ್ ಕತ್ತಿ ಪಂಚೆ ಬನಿಯನ್​ನಲ್ಲೇ ಹೊರ ಬಂದು ತಮ್ಮ ರಾಜಕೀಯ ಇತಿಹಾಸ ಹೇಳಿ ಟಾಂಗ್ ಕೊಡುವ ಕೆಲಸ ಮಾಡಿದರು. ಎರಡು ಮನೆತನದ ನಡುವಿನ ವೈಯಕ್ತಿಕ ಜಗಳ ಇದೀಗ ಬೀದಿಗೆ ಬಿದ್ದಿದ್ದು, ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES
- Advertisment -
Google search engine

Most Popular