ವರದಿ :ಸ್ಟೀಫನ್ ಜೇಮ್ಸ್.
ಅಥಣಿ(ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಸೋಮವಾರ ಸಂಚರಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ತಡೆದು ಪ್ರತಿಭಟನೆ ನಡೆಸಿದರು.
ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯದ ಬಸ್ ಅನ್ನು ಶಿವಸೇನೆಯವರು ತಡೆದಿದ್ದಕ್ಕೆ ಪ್ರತಿಯಾಗಿ, ಮಹಾರಾಷ್ಟ್ರ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಶಿವಸೇನಾ ಕಾರ್ಯಕರ್ತರ ಪುಂಡಾಟಿಕೆ: ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಬಂದ್
ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗೆ ಶಿವಸೇನೆಯವರು ‘ಜೈ ಮಹಾರಾಷ್ಟ್ರ’ ಸ್ಟಿಕ್ಕರ್ ಅಂಟಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ಸೋಮವಾರ ಮಧ್ಯಾಹ್ನದಿಂದ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಬೆಳಗಾವಿಯಲ್ಲಿ ಎಂಇಎಸ್ ನವರು ಮಹಾಮೇಳಾವ್ ನಡೆಸಲು ಮುಂದಾಗಿದ್ದರು. ಇದಕ್ಕೆ ಜಿಲ್ಲಾಡಳಿತ ಅನುಮತಿ ಕೊಡದ ಕಾರಣ, ಕೊಲ್ಲಾಪುರದಲ್ಲಿ ಶಿವಸೇನೆಯವರು ಪುಂಡಾಟಿಕೆ ಮೆರೆದಿದ್ದರು. ಈಗ ಮಹಾರಾಷ್ಟ್ರ ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಬಳಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ತಡೆಯುವಂತೆ ಪೊಲೀಸರು ಸೂಚಿಸಿದ ಕಾರಣ, ಸಾರಿಗೆ ಸಂಸ್ಥೆ ಅಧಿಕಾರಿಗಳು ಈ ಕ್ರಮ ವಹಿಸಿದ್ದಾರೆ.
‘ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದ ಬಸ್ ಗಳು ನಿಪ್ಪಾಣಿಯವರೆಗೆ ಹೋಗಿ ವಾಪಸಾಗುತ್ತಿವೆ’ ಎಂದು ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್.ಗುಡೆನ್ನವರ ‘ರಾಜ್ಯಧರ್ಮ’ಕ್ಕೆ ತಿಳಿಸಿದರು.



