Tuesday, September 16, 2025
Google search engine

Homeರಾಜಕೀಯಬೆಳಗಾವಿ ರೈಲ್ವೆ ಮಾರ್ಗ: ಭೂಸ್ವಾಧೀನ ಪ್ರಕ್ರಿಯೆಗೆ ಸಚಿವ ಲಾಡ್ ಸಹಕರಿಸುತ್ತಿಲ್ಲ: ಸೋಮಣ್ಣ

ಬೆಳಗಾವಿ ರೈಲ್ವೆ ಮಾರ್ಗ: ಭೂಸ್ವಾಧೀನ ಪ್ರಕ್ರಿಯೆಗೆ ಸಚಿವ ಲಾಡ್ ಸಹಕರಿಸುತ್ತಿಲ್ಲ: ಸೋಮಣ್ಣ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ‘ಬೆಳಗಾವಿ-ಚನ್ನಮ್ಮನ ಕಿತ್ತೂರು-ಧಾರವಾಡ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಹಕರಿಸುತ್ತಿಲ್ಲ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದರು.


ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಗೆ ಬೆಳಗಾವಿ ಜಿಲ್ಲೆಯಲ್ಲಿ 1,200 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ 45 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆಗಬೇಕಿದೆ. ಲಾಡ್ ಅವರನ್ನು ಮತ್ತೆ ಭೇಟಿಯಾಗಿ ಈ ಬಿಕ್ಕಟ್ಟು ಪರಿಹರಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಅವರು ಸಹಕರಿಸದಿದ್ದರೆ ನಮ್ಮ ಬಳಿಯೂ ಪರ್ಯಾಯ ಮಾರ್ಗಗಳಿವೆ’ ಎಂದರು.


‘ಈ ಯೋಜನೆಗೆ ಕೇಂದ್ರ ರೂ. 937 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಶೇ 100ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಅಡೆತಡೆ ಎದುರಾಗಿವೆ. ಈ ಮಾರ್ಗ ನಿರ್ಮಾಣವಾದರೆ ಬೆಳಗಾವಿ-ಧಾರವಾಡ ಮಧ್ಯೆ ಪ್ರಯಾಣದ ಸಮಯ ಒಂದು ಗಂಟೆಗೂ ಹೆಚ್ಚುಕಡಿಮೆಯಾಗುತ್ತದೆ. ಎರಡು ನಗರಗಳ ನಡುವಿನ ರೈಲ್ವೆ ಸಂಪರ್ಕ ಹೆಚ್ಚಾಗುತ್ತದೆ’ ಎಂದು ಹೇಳಿದರು.

‘ಧಾರವಾಡ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ಲಾಡ್ ಅವರೊಂದಿಗೆ ಎರಡೂರು ಬಾರಿ ಮಾತನಾಡಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಕೂಡ ಮಾತನಾಡಿದ್ದಾರೆ. ಆದರೆ, ಎಷ್ಟೇ ಸಲ ಸಂಪರ್ಕಿಸಿದರೂ ಲಾಡ್ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.


‘ಸಂತೋಷ ಲಾಡ್: ರಾಜಕೀಯ ರಂಗದಲ್ಲಿ ಇನ್ನೂ ಬೆಳೆಯುತ್ತಿರುವವರು. ಆದರೆ, ಏಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಇನ್ನೊಮ್ಮೆ ನಾನೇ ಅವರನ್ನು ಹುಡುಕಿಕೊಂಡು ಹೋಗುತ್ತೇನೆ. ರಾಜಕೀಯಕ್ಕಾಗಿ ಅಭಿವೃದ್ಧಿ ಕೆಲಸಗಳನ್ನು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ತಿಳಿಸಿದರು. ‘ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ಜತೆಗೆ ಮಾತುಕತೆಯಾಗಿದೆ. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಭೇಟಿಯಾದಾಗ, ನನ್ನದೇ ಭಾಷೆಯಲ್ಲಿ ಮಾತನಾಡಿದ್ದೇನೆ. ಏಕೆ ಯೋಜನೆಗೆ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಬೇಕು. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.

‘ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಗಢ ಮತ್ತಿತರ ರಾಜ್ಯಗಳಲ್ಲಿ ರೈಲ್ವೆ ಯೋಜನೆಗಳಿಗೆ ಆಯಾ ರಾಜ್ಯ ಸರ್ಕಾರಗಳು ಉತ್ತಮ ಸಹಕಾರ ನೀಡುತ್ತಿವೆ. ಕರ್ನಾಟಕ ಸರ್ಕಾರವೂ ಇದನ್ನು ನೋಡಿ, ಅಭಿವೃದ್ಧಿ ಕೆಲಸಕ್ಕೆ ಸಹಕಾರ ಕೊಡಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡಲು ಬಯಸುವುದಿಲ್ಲ’ ಎಂದರು.

‘ರೈಲ್ವೆ ಯೋಜನೆಗಳು, ರೈಲು ನಿಲ್ದಾಣಗಳ ನವೀಕರಣ, ಮಾರ್ಗ ದ್ವಿಗುಣಗೊಳಿಸುವಿಕೆ, ರೈಲ್ವೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಇತರೆ ಅಭಿವೃದ್ಧಿ ಕೆಲಸಕ್ಕಾಗಿ 2014ರಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ರೂ. 2,900 ಕೋಟಿ ಬಿಡುಗಡೆ ಮಾಡಿದೆ. ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಬೇಕೆಂಬ ಬೇಡಿಕೆ ಈಡೇರಿಸಲಾಗಿದೆ. ಸ್ಥಳೀಯ ಸಂಸದರು ಸಮಯ ಪರಿಷ್ಕರಿಸುತ್ತಾರೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


‘ಅಳ್ಳಾವರ-ದಾಂಡೇಲಿ ಮಾರ್ಗದಲ್ಲಿ ರೈಲು ಸೇವೆಯನ್ನು ಒಂದು ತಿಂಗಳೊಳಗೆ ಆರಂಭಿಸಲಾಗುವುದು. ದೇಶದಲ್ಲಿ ರೈಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ. ಪ್ರಧಾನಿ ಕನಸಿನಂತೆ 2047ರ ವೇಳೆ ವಿಕಸಿತ ಭಾರತ ನಿರ್ಮಿಸುವ ಕಡೆ ಹೆಜ್ಜೆ ಇರಿಸಿದ್ದೇವೆ. ಲೋಕಾಪುರ-ರಾಮದುರ್ಗ- ಸವದತ್ತಿ-ಧಾರವಾಡ ರೈಲ್ವೆಯೋಜನೆಗೆ ಸಂಬಂಧಿಸಿ, ಮರುಸಮೀಕ್ಷೆಗೆ ಆದೇಶವಾಗಿದೆ’ ಎಂದರು.

RELATED ARTICLES
- Advertisment -
Google search engine

Most Popular