Saturday, December 20, 2025
Google search engine

Homeರಾಜಕೀಯವಿಪಕ್ಷಗಳ ಗದ್ದಲದ ನಡುವೆಯೇ ಬೆಳಗಾವಿ ಅಧಿವೇಶನ ಸಂಪನ್ನ..!

ವಿಪಕ್ಷಗಳ ಗದ್ದಲದ ನಡುವೆಯೇ ಬೆಳಗಾವಿ ಅಧಿವೇಶನ ಸಂಪನ್ನ..!

ಬೆಳಗಾವಿ: ಡಿ.8 ರಿಂದ ಶುರುವಾಗಿ 10 ದಿನ ನಡೆದ ವಿಧಾನಮಂಡಲದ ಅಧಿವೇಶನ ಅನಿರ್ದಿಷ್ಟಾವಧಿ ಅವಧಿಗೆ ಮುಂದೂಡಿಕೆಯಾಯಿತು. ಗೃಹಲಕ್ಷ್ಮಿ ಬಾಕಿ, ದ್ವೇಷ ಭಾಷಣ ವಿಧೇಯಕದ ವಿಚಾರವಾಗಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದ 10 ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಶುಕ್ರವಾರ ಸಂಪನ್ನವಾಗಿದೆ.

ಈ 10 ದಿನಗಳ ಅಧಿವೇಶನದಲ್ಲಿ ಹಲವಾರು ಮಸೂದೆಗಳು ಅಂಗೀಕಾರಗೊಂಡಿದ್ದು, ಈ ವಿಧಾನಸಭೆಯಲ್ಲಿ ಒಳ ಮೀಸಲಾತಿಗೆ ಕಾನೂನು ಬಲ ನೀಡುವ ಮಸೂದೆಗಳೂ ಸೇರಿ ಒಟ್ಟು 23 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ. ದ್ವೇಷ ಭಾಷಣ ಮಾಡುವವರನ್ನು ಹಾಗೂ ಪ್ರಚೋದಿಸಿದವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಅಂಗೀಕಾರ ಪಡೆದುಕೊಂಡಿತ್ತು. ಇನ್ನೂ ಸಾಮಾಜಿಕ ಬಹಿಷ್ಕಾರ ಹಾಕುವವರು, ಅದಕ್ಕೆ ಪೂರಕ ನೆರವು ನೀಡುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಇರುವ ಮಸೂದೆಗೆ ಎರಡೂ ಸದನಗಳಲ್ಲಿ ಸುದೀರ್ಘ ಚರ್ಚೆಯ ಬಳಿಕ ಮಸೂದೆಗೆ ಅನುಮೋದನೆ ನೀಡಲಾಯಿತು.

ಅಲ್ಲದೇ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಮೂರು ಪಕ್ಷಗಳ ಸದಸ್ಯರು ವಿವರವಾಗಿ ಚರ್ಚಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ವಿರೋಧ ಪಕ್ಷಗಳು ಸರ್ಕಾರದ ಗಮನ ಸೆಳೆದವು. ಬೆಳೆ ಹಾನಿ ಮತ್ತು ರೈತರ ಸಂಕಷ್ಟಗಳ ಬಗ್ಗೆಯೂ ಎಲ್ಲ ಸದಸ್ಯರು ಸದನದಲ್ಲಿ ಪ್ರಸ್ತಾಪಿಸಿದರು.

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಸದನ ಪ್ರಾರಂಭವಾಗಿ 2ನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಶುರುವಾಗಿದ್ದು, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಬರೋಬ್ಬರಿ 39 ಸದಸ್ಯರು 17.02 ಗಂಟೆಗಳ ಕಾಲ ಚರ್ಚೆ ಮಾಡಿದರೆ, ಪರಿಷತ್ತಿನಲ್ಲಿ 12 ಜನ ಸದಸ್ಯರು 5 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ, ನಾನು ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿಯೇ ಇರುತ್ತೇನೆ ಎಂದು ದೃಢವಾಗಿ ಹೇಳಿಕೆಯೊಡನೆ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರೆಂದು ತಿಳಿಸಿದರು.

ಈ ನಡುವೆ ಶಾಸಕ ಮಹೇಶ ಟೆಂಗಿನಕಾಯಿ ಸದನದ ಮೂರನೇ ದಿನ ಪ್ರಸ್ತಾಪಿಸಿದ ಗೃಹಲಕ್ಷ್ಮಿ ಯೋಜನೆ ಎರಡು ಕಂತು ಬಾಕಿ ಸರ್ಕಾರವನ್ನು ಅಕ್ಷರಶಃ ಇಡೀ ಸದನದಲ್ಲಿ ಅದರ ಪ್ರಭಾವ ನಡುಗಿಸಿತು. ಕೊನೆಗೆ ಸರ್ಕಾರದ ಪರ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸದನಕ್ಕೆ ಕ್ಷಮೆ ಕೇಳಿದ್ದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿತು.

ಈ ಅಧಿವೇಶನದಲ್ಲಿ ಎರಡು ಮಹತ್ವದ ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಲಾಯಿತು. ಪರಿಶಿಷ್ಟ ಜಾತಿಗಳ 101 ಉಪಜಾತಿಗಳಿಗೆ ಮೂರು ಪ್ರವರ್ಗಗಳಾಗಿ ಒಳ ಮೀಸಲಾತಿ ನೀಡುವ ಕರ್ನಾಟಕ ಅನುಸೂಚಿತ ಜಾತಿಗಳ ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಯಿತು. ವಿರೋಧ ಪಕ್ಷದ ಗದ್ದಲದ ನಡುವೆಯೇ ಮಸೂದೆ ಅಂಗೀಕರಿಸಲ್ಪಟ್ಟಿದ್ದು, ಇನ್ನೊಂದೆಡೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಮಸೂದೆಯು ಅನುಮೋದನೆ ಪಡೆಯುವ ಮೊದಲು ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು.

ಇಷ್ಟರ ಮಧ್ಯೆ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳ ನಡುವಿನ ಅಭಿವೃದ್ಧಿ ಅಂತರವನ್ನು ಕಡಿಮೆ ಮಾಡುವುದು ಪ್ರಮುಖ ವಿಷಯವಾಗಿಯೇ ಉಳಿಯಿತು. ಸರ್ಕಾರವು ಉತ್ತರ ಕರ್ನಾಟಕಕ್ಕೆ 3,500 ಕೋಟಿ ರೂ.ಗಳ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಅನ್ನು ಘೋಷಿಸಿದ್ದು, ಕೃಷ್ಣ ಮತ್ತು ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿ ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಗಣನೀಯ ಅನುದಾನ ಹಂಚಿಕೆ ಮಾಡಿತು ಹಾಗೂ ಉತ್ತರ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ತನ್ನ ಸರ್ಕಾರದ ಬದ್ಧತೆಯ ಬಗ್ಗೆ ಸಿಎಂ ಸದನಕ್ಕೆ ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ವಾಗ್ವಾದ ನಡೆಸಿದ್ದರಿಂದ ರಾಜಕೀಯ ಬಿಸಿ ಏರತೊಡಗಿತ್ತು. ಉಭಯ ಸದನಗಳಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ, ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಚರ್ಚೆಗಳು ನಡೆದವು, ಸಚಿವರು ಕಾಲಮಿತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೆಲ್ಲದರ ನಡುವೆ ರಾಜ್ಯ ರಾಜಕೀಯದಲ್ಲಿ ಅಧಿಕಾರ ಬದಲಾವಣೆಯ ಬಿಸಿ ಬಿಸಿ ಚರ್ಚೆಯ ನಡುವೆಯೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿದಿದೆ. ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗೆ ಪರಿಹಾರ ಸೇರಿ ಹತ್ತು ಹಲವು ವಿಷಯಗಳ ಕುರಿತು ಸದಸ್ಯರು ಪಕ್ಷಾತೀತವಾಗಿ ಬೆಳಕು ಚೆಲ್ಲಿದರು. ಬೆಳಗಾವಿ ಮತ್ತೊಮ್ಮೆ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯನ್ನು ರೂಪಿಸುವ ನಿರ್ಣಾಯಕ ನಿರ್ಧಾರಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿದ್ದು, ಹಲವಾಋಉ ಸದ್ದು ಗದ್ದಲಗಳ ನಡುವೆ ಅಧವೇಶನ ಸಂಪನ್ನಗೊಂಡಿದೆ.

RELATED ARTICLES
- Advertisment -
Google search engine

Most Popular