ಬೆಳಗಾವಿ : ಕುರ್ಚಿ ಕಾದಾಟದ ನಡುವೆ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಯುದ್ಧಕ್ಕೆ ಇದೀಗ ಕುಂದಾನಗರಿ ಕೂಡ ಸಜ್ಜಾಗಿದೆ. ಅಧಿವೇಶನ ಹಿನ್ನೆಲೆ ಈ ಬಾರಿ ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಡಿಸೆಂಬರ್ 19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ತಿಳಿಸಲಾಗಿದೆ.
ಇನ್ನೂ ಮೊದಲ ದಿನವಾದ ಇವತ್ತು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆ ನಡೆಯಲಿದೆ. ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಹಾಲಿ ಶಾಸಕರಾಗಿದ್ದ ಹೆಚ್.ವೈ ಮೇಟಿ, ಮಾಜಿ ಶಾಸಕ ಆರ್.ವಿ ದೇವರಾಜು, ಬಾಲಿವುಡ್ ನಟ ಧರ್ಮೇಂದ್ರ, ಹಿರಿಯ ನಟ ಉಮೇಶ್, ಹರೀಶ್ ರಾಯ್, ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಹಲವಾರು ಗಣ್ಯರಿಗೆ ಸಂತಾಪ ಸೂಚನಾ ಸಭೆ ನಡೆಯಲಿದೆ. ಬಳಿಕ ಹಾಲಿ ಶಾಸಕ ಹೆಚ್.ವೈ ಮೇಟಿ ನಿಧನದ ಹಿನ್ನೆಲೆಯಲ್ಲಿ ಕಲಾಪವನ್ನ ನಾಳೆಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಆಡಳಿತ ಪಕ್ಷವನ್ನ ತರಾಟೆಗೆ ತೆಗೆದುಕೊಳ್ಳಲು ಸರ್ಕಾರ ರೆಡಿಯಾಗಿದ್ದು, ಕುರ್ಚಿ ಕಚ್ಚಾಟಕ್ಕೆ ಆಡಳಿತ ಕುಸಿತವೇ ಕಾರಣ ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ಮುಗಿ ಬಿದ್ದಿದೆ.. ಬಿಜೆಪಿ ಕಬ್ಬು ಬೆಳೆಗಾರರ ಹೋರಾಟ ಹಾಗೂ ಮೆಕ್ಕೆಜೋಳ ಬೆಲೆ ನಿಗದಿ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಿದ್ಧವಾಗಿದೆ. ನಾಯಕತ್ವ ಬದಲಾವಣೆ ವಿಚಾರ ಹಾಗೂ ಪರಪ್ಪನ ಅಗ್ರಹಾರದಲ್ಲಿ ಅಕ್ರಮಗಳು ವಿಪಕ್ಷಕ್ಕೆ ಅಸ್ತ್ರವಾಗಿದೆ.
ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ಸರ್ಕಾರದ ಸಿದ್ಧತೆ:
ಸರ್ಕಾರದ ಮೇಲೆ ಮುಗಿಬಿದ್ದು, ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ರಣತಂತ್ರ ರೂಪಿಸಿದೆ. ಇತ್ತ ವಿಪಕ್ಷಗಳ ಅಸ್ತ್ರಗಳನ್ನು ಎದುರಿಸಲು ಸರ್ಕಾರ ಕೂಡ ರೆಡಿಯಾಗಿದೆ. ಸಿಎಂ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವ ಹಿನ್ನೆಲೆ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ವಿಪಕ್ಷ ಬಿಜೆಪಿ ಚಿಂತಿಸಿತ್ತು. ಆದರೆ, ಈಗ ತನ್ನ ನಿರ್ಧಾರದಿಂದ ಕಮಲಪಡೆ ಹಿಂದೆ ಸರಿದಿದೆ. ಹಾಗೂ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಡಿಸೆಂಬರ್ 19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಸಾಧ್ಯತೆ ಇದೆ ಎನ್ನಲಾಗಿದೆ.



