ವರದಿ :ಸ್ಟೀಫನ್ ಜೇಮ್ಸ್.
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ಕುರಿತು ಉಂಟಾಗಿರುವ ಗೊಂದಲದ ಮಧ್ಯೆಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲ ಅಧಿವೇಶನದ ಆರಂಭವಾಗಲಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ರೈತರ ಸಂಕಷ್ಟ ಮತ್ತು ಬೆಲೆ ಏರಿಕೆ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳು ತೋಳೇರಿಸಿ ನಿಂತಿವೆ.
ಅಧಿಕಾರ ಹಂಚಿಕೆಯ ವಿಚಾರದಿಂದ ಉಂಟಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಉಪಹಾರ ಕೂಟದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೊಂದಲವನ್ನು ಬದಿಗೆ ಸರಿಸಿ ಒಗ್ಗಟಿನ ಮಂತ್ರ ಜಪಿಸಿದ್ದಾರೆ. ಈ ಮೂಲಕ ಕಲಾಪವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಇಬ್ಬರು ನಾಯಕರೂ ಸಿದ್ಧರಾಗಿದ್ದಾರೆ.
ಅಲ್ಲದೇ, ಇಡೀ ಅಧಿವೇಶನವನ್ನು ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಕೇಂದ್ರಿತವಾಗಿ ನಡೆಸುವ ಮೂಲಕ ವಿರೋಧಪಕ್ಷಗಳನ್ನು ಆ ವಿಷಯಕ್ಕಷ್ಟೇ ಕಟ್ಟಿ ಹಾಕಲು ಕಾಂಗ್ರೆಸ್ ಸನ್ನದ್ಧವಾಗಿದೆ. ಆದ ಕಾರಣ ಅಧಿವೇಶನದ ಮೊದಲ ವಾರವೇ ಉತ್ತರ ಕರ್ನಾಟಕದ ಕುರಿತಾದ ವಿಷಯವನ್ನೇ ಚರ್ಚೆಗೆ ಕೈಗೆತ್ತಿಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸದ್ಯಕ್ಕೆ ಒಂದಾಗಿರುವುದರಿಂದ ಅವಿಶ್ವಾಸ ನಿಲುವಳಿ ಮಂಡಿಸುವ ಬಗ್ಗೆ ಬಿಜೆಪಿ ಮರು ವಿಮರ್ಶೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಬ್ಬು ಮತ್ತು ಮೆಕ್ಕೆ ಜೋಳ ಬೆಳೆಗಾರರ ಸಮಸ್ಯೆ ಕುರಿತ ವಿಷಯವನ್ನು ವಿರೋಧ ಪಕ್ಷಗಳು ಕೈಗೆತ್ತಿಕೊಳ್ಳಲಿದ್ದು, ಅದಕ್ಕೆ ಮುನ್ನವೇ ರೈತರ ಸಂಕಷ್ಟವನ್ನು ಬಗೆಹರಿಸಲು ಸರ್ಕಾರ ಮುಂದಾಗಿದೆ. ಮುಖ್ಯವಾಗಿ ಮೆಕ್ಕೆ ಜೋಳಕ್ಕೆ ಸಂಬಂಧಿಸಿದಂತೆ ಪ್ರತಿ ರೈತರಿಂದ ಕ್ವಿಂಟಲ್‌ಗೆ ₹2,400 ರಂತೆ ಎಕರೆಗೆ ಒಬ್ಬ ರೈತನಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆ ಜೋಳ ಖರೀದಿಸುವ ಸಂಬಂಧ ಸರ್ಕಾರ ಭಾನುವಾರವೇ ಆದೇಶ ಹೊರಡಿಸಿದೆ. ಆದರೆ, ರೈತರ ಸಮಸ್ಯೆಯನ್ನು ಪ್ರಧಾನವಾಗಿ ಬಿಂಬಿಸಲು ಉದ್ದೇಶಿಸಿರುವ ಬಿಜೆಪಿ ಬೆಳಗಾವಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಮತ್ತು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಳೆ ಮತ್ತು ಪ್ರವಾಹದಿಂದ ಉಂಟಾದ ಬೆಳೆ ನಷ್ಟಕ್ಕೆ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ ಸರ್ಕಾರದ ಮೇಲೆ ಮುಗಿ ಬೀಳಲು ಸಿದ್ಧತೆ ನಡೆಸಿವೆ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನೇ ನೀಡುತ್ತಿಲ್ಲ, ತಾರತಮ್ಯ ಧೋರಣೆ ತೋರಿದೆ ಎಂದು ಪ್ರತ್ಯಸ್ತ್ರ ಹೂಡಲು ಸರ್ಕಾರ ಸಿದ್ಧವಾಗಿದೆ. ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಸೇರಿ ನೀರಾವರಿಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳು ಪ್ರಸ್ತಾಪವಾಗಲಿವೆ. ಸಿದ್ದರಾಮಯ್ಯ ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರ ಜತೆ ಉಪಹಾರ ಕೂಟದಲ್ಲಿ ಭಾಗವಹಿಸಿದ್ದಾಗ ₹43 ಲಕ್ಷ ಮೌಲ್ಯದ ಐಷಾರಾಮಿ ರೋಸ್ ಗೋಲ್ಡ್ ಸ್ಯಾಂಟೋಸ್ ಡಿ ಕಾರ್ಟಿಯರ್ ಕೈಗಡಿಯಾರ ಧರಿಸಿದ್ದು ವ್ಯಾಪಕ ಚರ್ಚೆ, ಟೀಕೆ-ಟಿಪ್ಪಣಿಗೆಗಳಿಗೆ ಕಾರಣವಾಗಿತ್ತು. ಇದು ಕೂಡ ಉಭಯ ಸದನಗಳಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಈ ಬಾರಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯೂ ಸೇರಿ ಸುಮಾರು 30 ಮಸೂದೆಗಳು ಮಂಡನೆಯಾಗಲಿವೆ.
ಈ ಅಧಿವೇಶನದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಲು ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನಿಸಿದ್ದು, ಸದನದೊಳಗೆ ಜಂಟಿ ಹೋರಾಟ ಹೇಗೆ ನಡೆಸಬೇಕು ಎಂಬುದರ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಸಮಾಲೋಚನೆ ಸಭೆಯನ್ನೂ ನಡೆಸಲಾಗಿದೆ.
ವಿಪಕ್ಷಗಳಿಗೆ ಅಸ್ತ್ರವಾದ ಪೊಲೀಸರ ಅಪರಾಧ
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಭ್ರಷ್ಟಾಚಾರವೂ ಹೆಚ್ಚಾಗಿದೆ’ ಎಂದು ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.
ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿಡಿಯೊ ತುಣುಕುಗಳ ದೃಶ್ಯಾವಳಿ ಸೋರಿಕೆ ಪ್ರಕರಣ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಅಲ್ಲದೇ, ಪೊಲೀಸರೇ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗುವ ಮೂಲಕ ಇಲಾಖೆಗೆ ಕಳಂಕ ತಂದಿರುವ ಪ್ರಕರಣಗಳು ಸರ್ಕಾರವನ್ನು ಇಕಟ್ಟಿಗೆ ಸಿಲುಕಿಸಲಿದೆ.
ದಾವಣಗೆರೆಯಲ್ಲಿ ಪೊಲೀಸರಿಂದ ಆಭರಣ ತಯಾರಕರೊಬ್ಬರಿಂದ ₹7.5 ಲಕ್ಷ ಚಿನ್ನಾಭರಣ ದರೋಡೆ, ಬಳ್ಳಾರಿಯಲ್ಲಿ ಪೊಲೀಸರಿಂದಲೇ 438.89 ಲಕ್ಷ ಹಣ, ಆಭರಣ ದರೋಡೆ, ಬಳ್ಳಾರಿಯಲ್ಲಿ ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯ ಮೇಲೆ ಪೊಲೀಸರೇ ಅತ್ಯಾಚಾರ ನಡೆಸಿದ್ದು, ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ದೂರು ನೀಡಲು ಬಂದ ಮಹಿಳೆಯ ಮೊಬೈಲ್‌ಗೆ ಕಾನ್‌ಸ್ಟೇಬಲ್ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಘಟನೆಯೂ ಸೇರಿ ಇದೇ ಮಾದರಿಯ ಹಲವು ಘಟನೆಗಳು ನಡೆದಿವೆ.
ಅಧಿಕಾರಿಗಳ ಪೋಸ್ಟಿಂಗ್‌ನಲ್ಲೂ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪವೂ ಇಲಾಖೆಯ ವಲಯದಲ್ಲಿ ದಟ್ಟವಾಗಿದೆ. ಆದರೆ ಗೃಹ ಸಚಿವ ಜಿ.ಪರಮೇಶ್ವರ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ.
RAJYADHARMA REPORT BELAGAVI



