ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಗಲಾಟೆ ಸಂಬಂಧ ಎಸ್ಪಿ ಪವನ್ ನೆಜ್ಜೂರ ತಲೆದಂಡದ ಬೆನ್ನಲ್ಲೇ ಇದೀಗ ಬಳ್ಳಾರಿ ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ ನೇಮಿಸಲಾಗಿದೆ. ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ.
ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಡಿ.ಪೆನ್ನೆಕರ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಸುಮನ್ನ ಡಿ.ಪನ್ನೇಕರ್ ಅವರು ಬೆಂಗಳೂರು ಗುಪ್ತಚರ ವಿಭಾಗದಲ್ಲಿ ಡಿಸಿಪಿಯಾಗಿದ್ದರು.
ಜ.1 ರಂದು ಬಳ್ಳಾರಿ ಎಸ್ ಪಿಯಾಗಿ ಪವನ್ ನೆಜ್ಜೂರ್ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿತ್ತು. ಅಲ್ಲದೇ ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಜಿ-ಐಜಿಪಿ ಕಡೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಐಜಿ ವರ್ತಿಕಾ ಕಟಿಯಾರ್ ಅವರನ್ನು ಸರ್ಕಾರ ವರ್ಗಾವಣೆ ಗೊಳಿಸಿದೆ.



