ಮಂಗಳೂರು (ದಕ್ಷಿಣ ಕನ್ನಡ): ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದ ಪ್ರಕರಣದ ಆರೋಪಿ ಉಮೇಶ್ ಗೌಡ ಎಂಬುವವರಿಗೆ ಬೆಳ್ತಂಗಡಿ ನ್ಯಾಯಾಲಯವು ಮೂರು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿದೆ.

2024 ಡಿಸೆಂಬರ್ 9ರಂದು ಕೊಯ್ಯೂರು ಗ್ರಾಮದ ಪಾಂಬೇಲು ಎಂಬಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಆರೋಪಿ ಉಮೇಶ್ ಗೌಡ ಚಿನ್ನದ ಸರವನ್ನು ಎಳೆದು ತುಂಡರಿಸಿ ಸರದೊಂದಿಗೆ ತಪ್ಪಿಸಿಕೊಂಡಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.
ಆರೋಪಿಯನ್ನು ಅದೇ ದಿನ ಬಂಧಿಸಲಾಗಿತ್ತು. ತನಿಖಾಧಿಕಾರಿಯಾದ ಬೆಳ್ತಂಗಡಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುಬ್ಬಾಪುರ ಮಠ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
126(2),309(5), 309(6) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಆರೋಪಿಗೆ ಮೂರು ವರ್ಷ ಕಠಿಣ ಕಾರಾಗೃಹ ವಾಸ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.