ಬೆಂಗಳೂರು : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದೇವಸ್ಥಾನದ ಸುತ್ತಮುತ್ತಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಇವತ್ತು ಆಗಸ್ಟ್ 15 ಮತ್ತು 16 ರಂದು ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಲಕ್ಷಾಂತರ ಭಕ್ತರು ಇಸ್ಕಾನ್‌ಗೆ ಆಗಮಿಸುವ ನಿರೀಕ್ಷೆಯಿರುವ ಕಾರಣ, ಸುಗಮ ಸಂಚಾರಕ್ಕಾಗಿ ಕ್ರಮವಹಿಸಲಾಗಿದೆ. ಸಂಚಾರದಲ್ಲಿ ಏನೆಲ್ಲಾ ಬದಲಾವಣೆ: ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೇ ಲೇಔಟ್ ಕಡೆಗೆ ಹೋಗುವ ವಾಹನಗಳು ಸೋಪ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಡಾ.ರಾಜ್‌ಕುಮಾರ್ ರಸ್ತೆಗೆ ಹೋಗಿ 10ನೇ ಕ್ರಾಸ್ ಅಥವಾ ಕೇತಮಾರನಹಳ್ಳಿ ಜಂಕ್ಷನ್‌ನಲ್ಲಿಬಲಕ್ಕೆ ತಿರುಗಿ 1ನೇ ಬ್ಲಾಕ್ ರಾಜಾಜಿನಗರ ಸಿಗ್ನಲ್‌ನಲ್ಲಿವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಸಾಗಬೇಕು ಎಂದು ಸೂಚಿಸಲಾಗಿದೆ.
ಇಸ್ಕಾನ್ ದೇವಸ್ಥಾನಕ್ಕೆ ಸಾರ್ವಜನಿಕರನ್ನು ಕರೆತರುವ ಆಟೊ, ಕ್ಯಾಬ್ ಚಾಲಕರು ಮಹಾಲಕ್ಷ್ಮೇ ಲೇಔಟ್ ಮೆಟ್ರೊ ನಿಲ್ದಾಣದ ಸಮೀಪ ಅಥವಾ ಸೋಪ್ ಫ್ಯಾಕ್ಟರಿ ಸಮೀಪ ಪಿಕ್‌ಅಪ್ ಮತ್ತು ಡ್ರಾಪ್ ಮಾಡಬೇಕು ಎಂದು ಹೇಳಲಾಗಿದೆ
ಇಸ್ಕಾನ್ ದೇವಸ್ಥಾನಕ್ಕೆ ಸ್ವಂತ ವಾಹನಗಳಲ್ಲಿಬರುವ ಭಕ್ತರನ್ನು ಮಹಾಲಕ್ಷ್ಮೇ ಲೇಔಟ್ ಮೆಟ್ರೊ ನಿಲ್ದಾಣದಿಂದ ಸೋಪ್ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿಇಳಿಸಬೇಕು ಮತ್ತು ವಾಹನಕ್ಕೆ ಹತ್ತಿಸಿಕೊಳ್ಳಬೇಕು ಎನ್ನಲಾಗಿದೆ.
ಇನ್ನು, ಬೆಂಗಳೂರಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆ.16ರಂದು ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇರುವ ಪ್ರಯುಕ್ತ, ಶನಿವಾರ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಕೃಷ್ಣ ಜನ್ಮಾಷ್ಟಮಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆ ದಿನ ಯಾರೂ ಯಾವುದೇ ರೀತಿಯ ಮಾಂಸ ಹಾಗೂ ಹಸಿ ಮೀನು ಮಾರಾಟ ಮಾಡಬಾರದು ಎಂದು ಹೇಳಿದ್ದಾರೆ.
ನಗರದ ಯಾವುದೇ ಮಾಂಸ ಮಾರಾಟದ ಅಂಗಡಿಗಳು, ಕೋಳಿ ಅಂಗಡಿಗಳು, ಮೀನುಮಾರಾಟ ಮಾಡಬಾರದು. ಆದೇಶ ಮೀರಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೋಯಿಂಗ್ ನಿಯಮ ಮತ್ತೊಮ್ಮೆ ಜಾರಿಗೆ ಬರುತ್ತಿದೆ. ಆಗಸ್ಟ್ ಅಂತ್ಯಕ್ಕೆ ಟೋಯಿಂಗ್ ವ್ಯವಸ್ಥೆ ಮರು ಪ್ರಾರಂಭವಾಗುತ್ತಿದ್ದು, ಈ ಬಗ್ಗೆ ಪರವಿರೋಧ ಚರ್ಚೆಗಳು ಆರಂಭವಾಗಿದೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ಪಾರ್ಕಿಂಗ್ ಸಮಸ್ಯೆ ಉಂಟಾಗಿದ್ದು, ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಈ ಬಾರಿ ಟೋಯಿಂಗ್ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದೆ.
ಸದ್ಯ ಬೆಂಗಳೂರಲ್ಲಿ ಒಂದು ಸಾವಿರ ಜನಸಂಖ್ಯೆಗೆ ಸರಾಸರಿ 848 ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ವಾಹನಗಳ ಸಂಖ್ಯೆ ಏರಿಕೆಯಾದಂತೆ ಪಾರ್ಕಿಂಗ್ ಸೌಕರ್ಯ ಕಲ್ಪಿಸುವುದು ದೊಡ್ಡ ಸವಾಲಾಗಿದ್ದು, ಸಂಚಾರ ಡಟ್ಟಣೆ ನಿಯಂತ್ರಣಕ್ಕೆ ಟೋಯಿಂಗ್ ನಿಯಮವನ್ನು ಮತ್ತೊಮ್ಮೆ ಜಾರಿ ಮಾಡಲಾಗುತ್ತಿದೆ.
ಈ ಹಿಂದೆ ವಾಹನ ನಿಲುಗಡೆ ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ದಂಡದ ಜತೆಗೆ ಹೆಚ್ಚುವರಿ ಟೋಯಿಂಗ್ ಶುಲ್ಕವೆಂದು 800 ರೂ. ವಿಧಿಸಲಾಗುತ್ತಿತ್ತು. ಇದು ಸಾರ್ವಜನಿಕರು ಹಾಗೂ ಸಿಬ್ಬಂದಿ ನಡುವೆ ಜಟಾಪಟಿಗೆ ಕಾರಣವಾಗುತ್ತಿತ್ತು.ಹೆಚ್ಚುವರಿ ಶುಲ್ಕದ ಕಾರಣಕ್ಕೆ ಟೋಯಿಂಗ್ ವಾಹನ ಸಿಬ್ಬಂದಿ ಮತ್ತು ವಾಹನ ಮಾಲೀಕರ ಮಧ್ಯೆ ಹಾದಿ ಬೀದಿಯಲ್ಲಿ ಜಗಳವಾಗುತ್ತಿದ್ದವು. ಈ ಬಾರಿ ಕೇವಲ ದಂಡ ಮಾತ್ರ ಪಾವತಿಸಿ ವಾಹನ ವಾಪಸ್ ಪಡೆಯಲು ಸೂಚಿಸಲಾಗಿದೆ.