Tuesday, May 20, 2025
Google search engine

Homeರಾಜ್ಯಬೆಂಗಳೂರಿನ ಚಿರತೆ ಪಡೆ 2 ದಿನಗಳಲ್ಲಿ ಕಾರ್ಯಾರಂಭ: ಈಶ್ವರ ಖಂಡ್ರೆ

ಬೆಂಗಳೂರಿನ ಚಿರತೆ ಪಡೆ 2 ದಿನಗಳಲ್ಲಿ ಕಾರ್ಯಾರಂಭ: ಈಶ್ವರ ಖಂಡ್ರೆ

ಬೆಂಗಳೂರು: ಬೆಂಗಳೂರು ಹೊರ ವಲಯದಲ್ಲಿ ಪದೆ ಪದೆ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆ ರಚನೆ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಇನ್ನು, 2 ದಿನಗಳ ಒಳಗಾಗಿ ಕಾರ್ಯಾರಂಭ ಮಾಡಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಮೂಡಿಗೆರೆಯಲ್ಲಿ ನಿನ್ನೆ ಕಾಡಾನೆ ನಿಗ್ರಹ ದಳದ ಕಾರ್ತಿಕ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಆನೆ ದಾಳಿ ಸಾವಿನ ಕುರಿತು ವರದಿಗೆ ಸೂಚನೆ: ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಆನೆ ದಾಳಿ ಸಾವಿನ ಎಲ್ಲ ಪ್ರಕರಣಗಳ ಕುರಿತಂತೆ ಪರಾಮರ್ಶಿಸಿ, ಯಾವ ಭಾಗದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ತಿಳಿದು ಪರಿಹಾರೋಪಾಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಆನೆಗಳು ಯಾವ ಯಾವ ಋತುವಿನಲ್ಲಿ ಯಾವ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ ಎಂಬ ಬಗ್ಗೆಯೂ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುಂಚಿತವಾಗಿಯೇ ಜಾಗೃತಿ ಮೂಡಿಸಲು ಮತ್ತು ಮಾಹಿತಿ ನೀಡಲು ಸೂಚಿಸಿದರು.
ಅರಿವು ಕಾರ್ಯಕ್ರಮ: ಅರಣ್ಯದಂಚಿನ ಶಾಲೆ ಕಾಲೇಜುಗಳಿಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ತಜ್ಞರು ತೆರಳಿ ವಿದ್ಯಾರ್ಥಿಗಳಿಗೆ ಆನೆಗಳು ಮತ್ತು ಕಾಡು ಪ್ರಾಣಿಗಳ ಸ್ವಭಾವದ ಬಗ್ಗೆ ಹಾಗೂ ಕಾಡು ಪ್ರಾಣಿಗಳ ನಾಡಿಗೆ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆಯೂ ತಿಳಿಯ ಹೇಳಲು ಸೂಚಿಸಿದರು.
ರೈಲ್ವೆ ಬ್ಯಾರಿಕೇಡ್, ಆನೆ ನಿಗ್ರಹ ಕಂದಕ ಮತ್ತು ಸೌರ ಬೇಲಿಗಳನ್ನು ಅಳವಡಿಸುವ ಕುರಿತಂತೆಯೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಿಳಂಬ ಮಾಡಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಎಲ್ಲ ಉನ್ನತ ಅಧಿಕಾರಿಗಳೂ ವಾರದಲ್ಲಿ ಕನಿಷ್ಠ 2 ದಿನ ಕಾಡಾನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದೂ ತಿಳಿಸಲಾಗಿದ್ದು, ಹಿರಿಯ ಐ.ಎಫ್.ಎಸ್. ಅಧಿಕಾರಿಗಳನ್ನು ವಿವಿಧ ಜಿಲ್ಲೆಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಅಧಿಕಾರಿಗಳು ನಿಯೋಜಿತ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಕುರಿತಂತೆ ಪರಿಶೀಲನಾ ಸಭೆ ನಡಿ, ಜಿಲೆಯಲ್ಲಿ ಬಾಕಿ ಇರುವ ವಿವಿಧ ಪರಿಹಾರ ಧನ ಪಾವತಿಸುವ ಪ್ರಕರಣಗಳ ಕುರಿತೂ ಚರ್ಚಿಸಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.
ಆನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆ ಕಾರಣ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಕಾಡಿನಂಚಿನ ನೆಡುತೋಪುಗಳಲ್ಲಿ, ಪರಿಭಾವಿತ ಅರಣ್ಯದಲ್ಲಿ ಸೊಪ್ಪು, ಹಣ್ಣು, ಎಲೆ, ತೊಗಟೆ, ಬಿದುರು ಇತ್ಯಾದಿ ಸಿಗುವಂತೆ ಕ್ರಮ ವಹಿಸಲು ಹಾಗೂ ಅರಣ್ಯದೊಳಗೆ ಬೇಸಿಗೆಯಲ್ಲೂ ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ನಿರ್ದೇಶಿಸಿದರು.

RELATED ARTICLES
- Advertisment -
Google search engine

Most Popular