Saturday, September 6, 2025
Google search engine

Homeರಾಜ್ಯಸುದ್ದಿಜಾಲಬೆಟ್ಟದಪುರ: ಗ್ರಾಮೀಣ ಸಮೃದ್ಧಿಗೆ ಧರ್ಮಸ್ಥಳ ಯೋಜನೆಯ ಮಹತ್ವದ ಕೊಡುಗೆ : ನಿರ್ದೇಶಕಿ ಲೀಲಾವತಿ

ಬೆಟ್ಟದಪುರ: ಗ್ರಾಮೀಣ ಸಮೃದ್ಧಿಗೆ ಧರ್ಮಸ್ಥಳ ಯೋಜನೆಯ ಮಹತ್ವದ ಕೊಡುಗೆ : ನಿರ್ದೇಶಕಿ ಲೀಲಾವತಿ

ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ : ಗ್ರಾಮೀಣ ಭಾಗದ ಜನರು ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾತ್ರ ದೊಡ್ಡದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲೆಯ ನಿರ್ದೇಶಕಿ ಲೀಲಾವತಿಯವರು ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರದಿಂದ ವಾತ್ಸಲ್ಯ ಯೋಜನೆ, ಜನಜಾಗೃತಿ ವೇದಿಕೆ ಸೇರಿದಂತೆ ಹಲವಾರು ಯೋಜನೆಗಳಿಂದ ಗ್ರಾಮೀಣ ಭಾಗದ ಜನರ ಬದುಕನ್ನು ರೂಪಿಸುತ್ತಿರುವುದು ಹೆಮ್ಮೆಯ ವಿಚಾರ. ಈವರೆಗೆ ಸುಮಾರು 800 ಕೋಟಿಗಳಷ್ಟು ಹಣವನ್ನು ವಿವಿಧ ಯೋಜನೆಗಳಿಗೆ ಅನುದಾನಗಳ ಮುಖಾಂತರ ನೀಡಲಾಗಿದೆ.ಜನಜಾಗೃತಿ ವೇದಿಕೆ ಮುಖಾಂತರ ಹಲವಾರು ಮಧ್ಯವರ್ಜಿನ ಶಿಬಿರಗಳನ್ನು ನಡೆಸಿ ಸಂಸಾರಗಳನ್ನು ಉಳಿಸುವ ಪ್ರಯತ್ನವನ್ನು ಶ್ರೀ ಕ್ಷೇತ್ರ ಮಾಡುತ್ತಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಬಡತನರು ದಿನನಿತ್ಯದ ಆದಾಯ ಮೂಲಕ ಸಂಸಾರ ನಿರ್ವಹಣೆ ಮಾಡಲು ಶ್ರಮ ವಹಿಸುತ್ತಿದೆ. ಬಡವನಾಗಿ ಹುಟ್ಟಿ ಬಡವನಾಗಿ ಸಾಯಬಾರದು ಎಂಬ ಪೂಜ್ಯರ ಕಲ್ಪನೆಯ ಮೇರೆಗೆ ಟ್ರಸ್ಟ್ ಗಳ ವತಿಯಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಗ್ರಾಮ ಕಲ್ಯಾಣ ಯೋಜನೆಯ ಮುಖಾಂತರ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಈವರೆಗೆ ಸುಮಾರು 45 ಕೋಟಿಗಿಂತಲೂ ಹೆಚ್ಚಿನ ನೆರವನ್ನು ನೀಡಲಾಗಿದೆ. ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ಪುನಶ್ಚೇತನ ನೀಡಲಾಗಿದೆ. ಸುಜ್ಞಾನ ನಿಧಿ ಕಾರ್ಯಕ್ರಮದ ಮೂಲಕ ಸಂಘದ ಸದಸ್ಯರುಗಳ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದರು.

16,000ಕ್ಕೂ ಹೆಚ್ಚು ದೇವಸ್ಥಾನಗಳಿಗೆ 250 ಕೋಟಿಗಿಂತ ಹೆಚ್ಚು ನೆರವನ್ನು ನೀಡುವುದರ ಮೂಲಕ ಧರ್ಮದ ಜಾಗೃತಿಯನ್ನು ಸಾರಲಾಗುತ್ತಿದೆ. ಅವಕಾಶಗಳು ಕೂಡ ಸಂಪತ್ತು ಇದ್ದ ಹಾಗೆ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ವಸಹಾಯ ಸಂಘಗಳು ಅಕ್ಷಯ ಪಾತ್ರೆ ಇದ್ದಂತೆ, ಈ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮಹಿಳೆಯರು ಸ್ವಾವಲಂಬಿಗಳಾಗಬೇಕು. ನಮ್ಮ ಸಂಸ್ಥೆಯ ಪ್ರತಿಯೊಬ್ಬ ನೌಕರರು ಸಂಘದಲ್ಲಿ ಸೇವೆ ಸಲ್ಲಿಸುವ ಮೂಲಕ ಬಡ ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಜಿ ಆರ್ ಮಂಜುನಾಥ ಮಾತನಾಡಿ ಪುರಾತನ ಕಾಲದಿಂದಲೂ ಅನ್ನದಾಸೋಹ ನಡೆಸುತ್ತಿರುವ ಏಕೈಕ ಕ್ಷೇತ್ರ ಧರ್ಮಸ್ಥಳ. ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಸೇರಿದಂತೆ ಬಡ ಜನರಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಸರ್ಕಾರದ ಅರ್ಧ ಕೆಲಸವನ್ನು ಶ್ರೀ ಕ್ಷೇತ್ರ ಮಾಡುತ್ತಿದ್ದು, ಶಿಕ್ಷಣಕ್ಕಾಗಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟಿ ಹಾಕಿದೆ. ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹೆಚ್ಚಿನ ಅನುದಾನ ನೀಡುತ್ತಿದ್ದು, ಇಂತಹ ಶ್ರೀ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಯುತ್ತಿರುವುದು ಖಂಡನೀಯ ಎಂದರು.

ಕಾರ್ಯಕ್ರಮದಲ್ಲಿ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಸ್ವಾಮಿ, ಉಪಾಧ್ಯಕ್ಷೆ ಸುನೀತಾ , ಗ್ರಾಮದ ಮುಖಂಡರಾದ ಸಿ.ಎನ್ ಕಾಳೇಗೌಡ, ಸಿ.ಎನ್ ಬಸವರಾಜು, ಪಟೇಲ್ ಕಾಳೇಗೌಡ, ಪೂಜಾ ಸಮಿತಿ ಅಧ್ಯಕ್ಷ ಸಿ.ಎ ನಂದೀಶ್, ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿ ಕೀರ್ತಿ, ಸಹಕಾರ್ಯದರ್ಶಿ ಜಿ.ಎಸ್ ಮಹದೇವ್, ಕೋಶಧಿಕಾರಿ ಸಿ.ಕೆ ಆಶಾ, ಜನಜಾಗೃತಿ ವೇದಿಕೆ ಸದಸ್ಯರಾದ ರಾಮಚಂದ್ರ, ಚಂದ್ರಶೇಖರ್, ಗ್ರಾ.ಪಂ ಕ್ಲರ್ಕ್ ಮಹೇಂದ್ರ, ಯೋಜನಾಧಿಕಾರಿ ಸಂತೋಷ್ ಕುಮಾರ್, ಸಮನ್ವಯಾಧಿಕಾರಿ ಮಮಿತಾ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular