ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಶಿಥಿಲಗೊಂಡು ಉದುರುತ್ತಿದ್ದ ೨ ಶತಮಾನಕ್ಕೂ ಹಳೆಯದಾದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಸೇರಿದ ಭೂ ಲಕ್ಷ್ಮಿ ವರಾಹಸ್ವಾಮಿ ದೇಗುಲವನ್ನು ಡಾ. ರಮೇಶ್ ಉಡುಪ, ಡಾ. ಶಶಿಕಲಾ ರಮೇಶ್ ದಂಪತಿ ಕುಟುಂಬ ಜೀರ್ಣೋದ್ಧಾರ ಮಾಡಿದ್ದು ಆ. ೯ ರಿಂದ ಆ.೧೧ ರ ವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಮುಕ್ತಾಯಗೊಂಡಿದ್ದು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸಾವಿರಾರು ಭಕ್ತರು ಭಾಗವಹಿಸುವ ಮೂಲಕ ಭಕ್ತಿ ಮೆರೆದರು.
ಇಲ್ಲಿರುವ ಶ್ರೀ ಭೂಲಕ್ಷ್ಮಿ ವರಾಹಸ್ವಾಮಿ, ಶ್ರೀ ಚೆನ್ನಕೇಶವಸ್ವಾಮಿ, ಶ್ರೀ ಮಹಾಲಕ್ಷ್ಮಿ ಅಮ್ಮ, ಶ್ರೀ ಮೂಲೆ ಗಣಪತಿ, ವಿಮಾನಗೋಪುರಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇದರ ಮಹಾ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕದ ಕಾರ್ಯಕ್ರಮದ ಅಂತಿಮ ದಿನವಾದ ಸೋಮವಾರ ಸ್ವಸ್ತಿ ಪುಣ್ಯಾಹವಾಚನ, ಶಾಂತಿ ಕಳಸ ಸಂಪನ್ನ, ಸರ್ವಾಗ್ನಿ ಕುಂಡೇಷು ಮಹಾಪೂರ್ಣಾಹುತಿ, ಆಲಯ ಪ್ರದಕ್ಷಿಣೆ, ಮಹದಾಶೀರ್ವಚನ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಕಳಸಾರೋಹಣ ಮಾಡಲಾಯಿತು.
ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು: ದೇವರ ದರ್ಶನಕ್ಕೆ ಪರ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದುಕೊಂಡರು. ಇಡೀ ದೇಗುಲವನ್ನು ವಿಶೇಷ ಫಲಪುಷ್ಪ, ವಿದ್ಯುತ್ ದೀಪಗಳಿಂದ ಇದಕ್ಕಾಗಿ ಅಲಂಕಾರ ಮಾಡಲಾಗಿತ್ತು. ನೆರೆದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಡಾ. ಶಶಿಕಲಾ, ರಮೇಶ್ ಉಡುಪ: ನಾವು ಇಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು ಈ ದೇಗುಲ ದರ್ಶನಕ್ಕೆ ತೆರಳಿದ್ದಾಗ ದೇಗುಲ ಶಿಥಿಲವಾಗಿರುವುದು ನಮ್ಮ ಗಮನಕ್ಕೆ ಬಂತು. ಹಾಗಾಗಿ ಈ ದೇಗುಲ ಜೀರ್ಣೋದ್ಧಾರ ಮಾಡಬೇಕೆಂದು ಮನಸ್ಸಾಯಿತು. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯಿತು. ಈಗ ಕೆಲಸ ಮುಗಿದಿದೆ. ೧ ಕೋಟಿ ರೂಗೂ ಹೆಚ್ಚು ಖರ್ಚಾಗಿದೆ. ಈ ಹಿಂದೆ ಕೆಲವರು ಇದನ್ನು ಜೀರ್ಣೋದ್ಧಾರಕ್ಕೆ ಕೈಹಾಕಿ ಇದು ಪೂರ್ಣಗೊಂಡಿರಲಿಲ್ಲ. ಈಗ ಇದು ಪೂರ್ಣಗೊಂಡಿದೆ. ಈಗ ಕಾಮಗಾರಿ ಮುಗಿದಿದೆ. ಆ. ೦೯ ರ ಸಂಜೆಯಿಂದ ಧಾರ್ಮಿಕ ವಿಧಿಗಳು ಆರಂಭಗೊಂಡು ಸೋಮವಾರ ಮುಗಿದಿದೆ. ಎಲ್ಲಾ ಸಾಂಗವಾಗಿ ನಡೆದಿದ್ದು ಇದಕ್ಕೆ ಸಹಕರಿಸಿದ ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಪಟ್ಟಣ ಹಾಗೂ ತಾಲೂಕಿನ ಎಲ್ಲಾ ಜನಾಂಗದ ಮುಖಂಡರು, ಸಾರ್ವಜನಿಕರಿಗೆ ಅಭಿನಂದನೆಯನ್ನು ಸಲ್ಲಿಸುವುದಾಗಿ ತಿಳಿಸಿದರು.