ಪಿರಿಯಾಪಟ್ಟಣ: ತಾಲೂಕಿನ ಭುವನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ದೇವರಾಜು.ಪಿ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಮತಾ ಆಯ್ಕೆಯಾದರು.
ಗ್ರಾ.ಪಂ ಕಚೇರಿಯಲ್ಲಿ ಬುಧವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿಗ ದೇವರಾಜು.ಪಿ ಜೆಡಿಎಸ್ ಬೆಂಬಲಿಗ ಸದಾನಂದ ಕೆ.ಎಸ್ ನಾಮಪತ್ರ ಸಲ್ಲಿಸಿದ್ದರು ಚುನಾವಣೆಯಲ್ಲಿ ದೇವರಾಜು.ಪಿ 12 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಸದಾನಂದ ಕೆ.ಎಸ್ 9 ಮತ ಪಡೆದು ಪರಾಭವಗೊಂಡರು, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿಗೆ ಮಮತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಅವಿರೋಧ ಆಯ್ಕೆ ಘೋಷಿಸಿದರು. ಫಲಿತಾಂಶ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಅವರು ಮಾತನಾಡಿ ಸಚಿವರಾದ ನಮ್ಮ ತಂದೆ ಕೆ.ವೆಂಕಟೇಶ್ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ತಾಲೂಕಿನಾದ್ಯಂತ ಹಲವು ಗ್ರಾಮ ಪಂಚಾಯತಿ ಸದಸ್ಯರು ನಮ್ಮನ್ನು ಬೆಂಬಲಿಸುತ್ತಿದ್ದು ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಅಧಿಕಾರಕ್ಕೆ ಬರಲು ಸಹಾಯವಾಗಿದೆ, ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಗ್ರಾಮಗಳಿಗೆ ಆದ್ಯತೆ ನೀಡಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.
ನೂತನ ಅಧ್ಯಕ್ಷ ದೇವರಾಜು ಪಿ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಪಡೆದು ಪಕ್ಷಾತೀತವಾಗಿ ಪಾರದರ್ಶಕ ಆಡಳಿತ ನೀಡಿ ಪ್ರತಿ ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಅಧಿಕಾರಕ್ಕೆ ಬರಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಜೆಡಿಎಸ್ ತಾಲೂಕು ಕಾರ್ಯದರ್ಶಿ ಬಿ.ವಿ ಗಿರೀಶ್ ಮಾತನಾಡಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ತಮ್ಮ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿ ಪಂಚಾಯತಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಂತೆ ಶುಭ ಕೋರಿದರು.
ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಒ ದೇವರಾಜೇಗೌಡ, ಸಿಬ್ಬಂದಿ ಸೀನಾ, ಸತ್ಯಣ್ಣ, ಗುರುಮೂರ್ತಿ, ರೇಖಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲೋಕೇಶ್, ಮುಖಂಡರಾದ ಪುಟ್ಟರಾಜು, ಬಿ.ಟಿ ಸಣ್ಣಸ್ವಾಮಿಗೌಡ, ಈರೇಗೌಡ, ರಮೇಶ್, ರಾಜಶೇಖರಯ್ಯ, ಗೋವಿಂದೇಗೌಡ, ಸೋಮೇಗೌಡ, ಮಲ್ಲೇಶ್, ಕುಮಾರ್, ರುಕ್ಮಗಂದಾಚಾರ್, ಶಂಕರ್, ವೆಂಕಟೇಶ್ ಹಾಗು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.
