ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ. ಒಟ್ಟು 18 ಜಿಲ್ಲೆಗಳಲ್ಲಿ 45,341 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 121 ಕ್ಷೇತ್ರಗಳಲ್ಲಿ 3.75 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ಇಬ್ಬರು ಉಪಮುಖ್ಯಮಂತ್ರಿಗಳು, 13 ಸಂಪುಟ ದರ್ಜೆ ಸಚಿವರು, ಸಿನಿಮಾ ತಾರೆಯರು, ಸಂಗೀತ ತಜ್ಞರು ಮತ್ತು ಕೊಲೆ ಆರೋಪಿಗಳು ಸೇರಿದಂತೆ ಬಿಹಾರ ವಿಧಾನಸಭೆ ಪ್ರವೇಶಿಸುವ ಕನಸು ಕಾಣುತ್ತಿರುವ 1314 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದಲ್ಲಿ ನಿರ್ಧಾರವಾಗಲಿದೆ.
ಕಣದಲ್ಲಿರುವ 15 ಸಚಿವರ ಪೈಕಿ 10 ಮಂದಿ ಬಿಜೆಪಿಯವರಾಗಿದ್ದು, ಉಪಮಖ್ಯಮಂತ್ರಿಗಳಾದ ಸಮರ್ಥ್ ಚೌಧರಿ (ತಾರಾಪುರ) ಮತ್ತ ವಿಜಯ್ ಕುಮಾರ್ ಸಿನ್ಹಾ (ಲಖಿಸರಾಯ್) ಇವರಲ್ಲಿ ಸೇರಿದ್ದಾರೆ. ವಿಜಯ್ ಕೆಆರ್ ಚೌಧರಿ (ಸರಾಯ್ ರಂಜನ್) ಮತ್ತು ಶಿಕ್ಷಣ ಸಚಿವ ಸುನೀಲ್ ಕುಮಾರ್ (ಬಹೋರ್) ಸೇರಿದಂತೆ ಸಂಯುಕ್ತ ಜನತಾದಳದ ಐದು ಮಂದಿ ಸಚಿವರು ಕಣದಲ್ಲಿದ್ದಾರೆ.
ಇಂಡಿಯಾ ಕೂಟದಂದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆ ಎನಿಸಿದ ರಾಘವಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಅವರು ಬಿಜೆಪಿಯ ಸತೀಶ್ ಕುಮಾರ್ ಅವರ ಜತೆ ಸೆಣೆಸುತ್ತಿದ್ದಾರೆ. ಜನಸುರಾಜ್ ಪಕ್ಷದ ಮುಖಂಡ ಪ್ರಶಾಂತ್ ಕಿಶೋರ್ ಇಲ್ಲಿಂದ ಸ್ಪರ್ಧಿಸುವ ಘೋಷಣೆ ಮಾಡಿದ್ದರೂ, ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ.
ಹೊಸ ಜನಶಕ್ತಿ ಜನತಾದಳ ಹೆಸರಿನಲ್ಲಿ ತೇಜಸ್ವಿ ಯಾದವ್ ಅಣ್ಣ ತೇಜಪ್ರತಾಪ್ ಯಾದವ್ ಮಹೂವಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ವೈಯಕ್ತಿಕ ಜೀನವದ ವಿವಾದಗಳ ಹಿನ್ನೆಲೆಯಲ್ಲಿ ಆರ್‌ಜೆಡಿ ಈ ವರ್ಷ ಅವರನ್ನು ಉಚ್ಚಾಟಿಸಿತ್ತು.
ಇಂದು ಮತ ಚಲಾಯಿಸುತ್ತಿರುವ 3.7 ಕೋಟಿ ಮತದಾರರ ಪೈಕಿ 10.7 ಲಕ್ಷ ಮಂದಿ ಹೊಸಬರು. ಇವರಲ್ಲಿ 7.3 ಲಕ್ಷ ಮಂದಿ 18-19ರ ವಯೋಮಾನದವರಾಗಿದ್ದಾರೆ.



