Tuesday, May 20, 2025
Google search engine

HomeUncategorizedರಾಷ್ಟ್ರೀಯಬಿಲ್ಕಿಸ್ ಬಾನೊ ಪ್ರಕರಣ: ಜ. 21 ರೊಳಗೆ ಶರಣಾಗಿ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಆದೇಶ

ಬಿಲ್ಕಿಸ್ ಬಾನೊ ಪ್ರಕರಣ: ಜ. 21 ರೊಳಗೆ ಶರಣಾಗಿ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚುವರಿ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಅದರಂತೆ ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವಿನ ಪ್ರಕಾರ ಜನವರಿ 21 ರೊಳಗೆ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ಆರೋಪದಲ್ಲಿ ಹನ್ನೊಂದು ಅಪರಾಧಿಗಳು ಸುಪ್ರೀಂ ಕೋರ್ಟ್ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ, ಆಗಸ್ಟ್ 14, 2023ರಂದು, ಈ ಅಪರಾಧಿಗಳನ್ನು ಗುಜರಾತ್‌ ಸರ್ಕಾರ ಅವಧಿಪೂರ್ವವಾಗಿ ಬಿಡುಗಡೆ ಮಾಡಿತ್ತು. ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್‌ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ ಜನವರಿ 8ರಂದು ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು. ಪ್ರಕರಣದ ಅಪರಾಧಿಗಳಿಗೆ ಕ್ಷಮಾದಾನ ನೀಡಲು ಗುಜರಾತ್‌ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದಿದ್ದ ಅದು ಎಲ್ಲಾ ಹನ್ನೊಂದು ಅಪರಾಧಿಗಳಿಗೆ ಎರಡು ವಾರಗಳಲ್ಲಿ ಶರಣಾಗುವಂತೆ ನಿರ್ದೇಶಿಸಿತ್ತು.

ಕೋರ್ಟ್ ಆದೇಶ ಬರುತ್ತಿದ್ದಂತೆ ಹನ್ನೊಂದು ಮಂದಿ ಅಪರಾಧಿಗಳ ಪೈಕಿ ಮೂವರು ಅಪರಾಧಿಗಳು ಶರಣಾಗಲು ಹೆಚ್ಚಿನ ಸಮಯ ಕೋರಿ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ಅರ್ಜಿಗಳಿಗೆ ಅರ್ಹತೆಯ ಕೊರತೆಯಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ ಮುಂದಿನ ಭಾನುವಾರದೊಳಗೆ ಎಲ್ಲ ಅಪರಾಧಿಗಳು ಜೈಲು ಅಧಿಕಾರಿಗಳಿಗೆ ವರದಿ ಮಾಡುವಂತೆ ಆದೇಶಿಸಿದೆ.

RELATED ARTICLES
- Advertisment -
Google search engine

Most Popular