Sunday, August 31, 2025
Google search engine

Homeಸ್ಥಳೀಯಮತಗಳ್ಳತನ ಆರೋಪ ಮರೆಮಾಚಲು ಬಿಜೆಪಿಯಿಂದ ಬಾನು ಮುಷ್ತಾಖ್ ವಿರೋಧ ಮುನ್ನಲೆಗೆ: ಡಿ.ರೇಹಾನ್ ಬೇಗ್ ಆರೋಪ

ಮತಗಳ್ಳತನ ಆರೋಪ ಮರೆಮಾಚಲು ಬಿಜೆಪಿಯಿಂದ ಬಾನು ಮುಷ್ತಾಖ್ ವಿರೋಧ ಮುನ್ನಲೆಗೆ: ಡಿ.ರೇಹಾನ್ ಬೇಗ್ ಆರೋಪ

ಮೈಸೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದಿರುವ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಶಾ ವಿರುದ್ಧ ಮಾಡಿರುವ ಮತಗಳವು (ವೋಟ್ ಚೋರಿ) ಆರೋಪದಿಂದ ವಿಚಲಿತರಾಗಿರುವ ಕರ್ನಾಟಕದ ಬಿಜೆಪಿ ನಾಯಕರು ಜನರ ಗಮನವನ್ನು ಬೇರೆಡೆ ಸೆಳೆಯಲು ಖ್ಯಾತ ಲೇಖಕಿ ಬಾನು ಮುಷ್ತಾಖ್ ವಿರುದ್ಧ ಮುಗಿ ಬಿದ್ದಿದ್ದಾರೆ ಎಂದು ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಆರೋಪಿಸಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ವಿವಿಧೆಡೆ ನಡೆದಿರುವ ಮತಗಳವು ಪ್ರಕರಣಗಳನ್ನು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ಸಾಬೀತು ಪಡಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಆದರೇ, ಚುನಾವಣಾ ಆಯೋಗವಾಗಲೀ ಸ್ವತಃ ಪ್ರಧಾನಿಯವರಾಗಲಿ ಈ ಆರೋಪವನ್ನು ಅಲ್ಲಗಳೆದಿಲ್ಲ, ದೇಶಾದ್ಯಂತ ನಡೆಯುತ್ತಿರುವ ‘ವೋಟ್ ಚೋರ್ ಗದ್ದಿ ಛೋಡ್’ ಅಭಿಯಾನವು ೧೪೦ ಕೋಟಿ ಮತದಾರರ ಗಮನ ಸೆಳೆದಿದೆ. ಪ್ರಸ್ತುತ ನಡೆಯುತ್ತಿರುವ ಬಿಹಾರದ ಚುನಾವಣೆಯಲ್ಲಿ ಮತಗಳವು ವಿಚಾರ ಅಲ್ಲಿನ ಮತದಾರರ ಮೇಲೆ ಅತ್ಯುತ್ತಮ ಪರಿಣಾಮ ಬೀರಿದ್ದು, ಅಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸ್ಪಷ್ಟ ಬಹುಮತ ಪಡೆಯಲಿವೆ, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ಅಭಿಯಾನ ಸಮರೋಪಾದಿಯಲ್ಲಿ ನಡೆದು ಕಾಂಗ್ರೆಸ್ ಪಕ್ಷ ಎಲ್ಲೆಡೆ ಜನಮನ್ನಣೆ ಗಳಿಸುವ ಸ್ಪಷ್ಟ ಲಕ್ಷಣಗಳು ಇರುವ ಕಾರಣ ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಈ ಕಾರಣದಿಂದ ಅವರು ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಖ್ಯಾತ ಲೇಖಕಿ ಬಾನು ಮುಷ್ತಾಖ್ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಈ ಹಿಂದಿನ ದಸರಾ ಕಾರ್ಯಕ್ರಮವನ್ನು ದೇವರನ್ನೆ ನಂಬದ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾರ್ನಾಡ್ ಉದ್ಘಾಟನೆ ಮಾಡಿದ್ದಾರೆ. ಇಸ್ಲಾಂ ಧರ್ಮಕ್ಕೆ ಸೇರಿದ ಕನ್ನಡದ ಖ್ಯಾತ ಲೇಖಕರಾದ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರಿಗೂ ಈ ಸದಾವಕಾಶ ಸಿಕ್ಕಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಒಂದು ನಾಡಹಬ್ಬ, ಈ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರಿಗೂ ಪಾಲ್ಗೊಳ್ಳುವ ಎಲ್ಲ ಅವಕಾಶಗಳಿವೆ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳ ಮಾವುತರು ಬಹುತೇಕ ಮುಸ್ಲಿಂ ಆಗಿದ್ದಾರೆ. ಚಿನ್ನದ ಅಂಬಾರಿಗೆ ಗಾದಿ ಸಿದ್ದಪಡಿಸುವವರು ಮುಸ್ಲಿಂ ಆಗಿದ್ದಾರೆ.

ದಸರಾ ಆನೆಗಳು ಇನ್ನೇನು ಇಮಾಂ ಷಾ ವಲಿ ದರ್ಗಾಕ್ಕೆ ಆಗಮಿಸಿ ಆಶೀರ್ವಾದ ಪಡೆಯಲಿವೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಂ ಆಗಿದ್ದರು, ದಸರಾ ಮೆರವಣಿಯಲ್ಲಿ ಅವರು ಸಹ ನಾಲ್ವಡಿಯವರ ಜತೆ ಕುಳಿತುಕೊಂಡಿದ್ದರು ಎಂಬ ಇತಿಹಾಸವೂ ಇದೆ. ಇಷ್ಟೇಲ್ಲ ವಿಚಾರಗಳು ನಮ್ಮ ಕಣ್ಣ ಮುಂದೆ ಇರುವಾಗ ಬಾನು ಮುಷ್ತಾಖ್ ಅವರಿಗೆ ನಿಮ್ಮ ನಿಷ್ಠೆ ತೋರಿಸಿ ಎನ್ನುವುದು ಹಾಸ್ಯಾಸ್ಪದ. ದಸರಾ ಉದ್ಘಾಟನೆಗೆ ಬಾನು ಮುಷ್ತಾಖ್ ಒಪ್ಪಿಕೊಳ್ಳುವ ಮೂಲಕ ಮೈಸೂರು ದಸರಾ ಸಂಭ್ರಮಕ್ಕೆ, ತಾಯಿ ಚಾಮುಂಡೇಶ್ವರಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ ಇನ್ನೇನು ಬೇಕು ಎಂದು ರೇಹಾನ್ ಬೇಗ್ ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular