ಬೆಳಗಾವಿ: ನಾಯಕತ್ವ ಬದಲಾವಣೆ ವಿಚಾರವಾಗಿ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಮತ್ತು ವಿಪಕ್ಷದ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವಿಚಾರವಾಗಿ ವಿಪಕ್ಷದ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಉರಿಯೋದರ ಮೇಲೆ ಉಪ್ಪು ಹಾಕ್ಬೇಡಿ ಎಂದರು. ಇದು ಮನದಾಳದ ಮಾತೋ ಎಂದು ಬಿಜೆಪಿ ಸದಸ್ಯರು ಕಾಲೆಳೆದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಮಾತಿಗೆ ಪ್ರತಿಕ್ರಿಯೆಯಾಗಿ, ಆರ್ ಅಶೋಕ್, ಸಿದ್ದರಾಮಯ್ಯ ಅವರ ಕಾಲೆಳೆದಿದ್ದು, ಇದಕ್ಕೆ “ಉರಿಯುದಕ್ಕೆ ಉಪ್ಪು ಹಾಕ್ಬೇಡ ನೀನು” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ವೇಳೆ ‘ಹಾಗಾದ್ರೆ ಉರಿತೈತಾ’ ಎಂದು ಆರ್ ಅಶೋಕ್ ಕಾಲೆಳೆದರು. ಅದು ಗಾದೆ ಮಾತು, ನಮ್ಮಲ್ಲಿ ಉರಿತಾ ಇಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿ ಕೊಡುವ ಪ್ರಯತ್ನ ನಡೆಸಿದ್ದು, ಹೀಗೆ ಸ್ವಾರಸ್ಯಕರ ಚರ್ಚೆ ಮುಂದುವರೆದಿದೆ.
ಅಶೋಕ್ : ಸಿಎಂ ಆಗಬೇಕು ಎಂದು ಪೂಜೆ ಪುರಸ್ಕಾರ ಮಾಡಲಾಗ್ತಿದೆ.
ಸುನೀಲ್ ಕುಮಾರ್ : ಗಾದೆ ಹೇಳಿದ್ರೋ ನಿಮ್ಮ ಮನಸ್ಸಿನಲ್ಲಿ ಇರೋದು ಹೇಳಿದ್ರೋ
ಸಿದ್ದರಾಮಯ್ಯ : ಉರಿಯೋದರ ಮೇಲೆ ಉಪ್ಪು ಹಾಕಬೇಡಿ, ವಿರೋಧ ಪಕ್ಷ ಇರೋದೆ ಉಪ್ಪು ಹಾಕಲು.
ಅಶೋಕ್ : ನಾವು ಉಪ್ಪು ಹಾಕಿದ್ರೆ ಪರವಾಗಿಲ್ಲ, ನಿಮ್ಮವರೇ ಹಾಕ್ತಾರಲ್ವಾ?
ಸಿದ್ದರಾಮಯ್ಯ : ಅವರು ಸುಮ್ಮನಿದ್ದಾರೆ, ನೀವ್ಯಾಕೆ ಇಲ್ಲ.
ಅಶೋಕ್ : ಅವರು ಸುಮ್ಮನಿಲ್ಲ, ಸಾಕಷ್ಟು ಬಾರಿ ಕೇಳಿದೆ, ಇಲ್ಲ ನಾನು ಪೂಜೆ ಮಾಡಿಸ್ತಿದ್ದೇನೆ, ವ್ರತ ಮಾಡಿಕೊಂಡಿದ್ದೇನೆ ಅಂತಾರೆ.
ಸಿದ್ದರಾಮಯ್ಯ: ನೀವು ಎಷ್ಟು ಕಿತಾಪತಿ ಮಾಡಿದ್ದರೂ, ಪ್ರಚೋದನೆ ಮಾಡಿದ್ದರೂ ನಮ್ಮವರು ಪ್ರಚೋದನೆಗೆ ಒಳಗಾಗಲ್ಲ.
ಅಶೋಕ್ : ನೀವೇ ಐದು ವರ್ಷ ಸಿಎಂ ಅಲ್ವಾ ಸರ್?
ಸಿದ್ದರಾಮಯ್ಯ : ನಮ್ಮ ಸರ್ಕಾರದ ಐದು ವರ್ಷ ಇರಲಿ ಎಂದು ಜನರು ಆಶೀರ್ವಾದ ಮಾಡಿದ್ದಾರೆ, ನಾವೇ ಐದು ವರ್ಷ ಇರ್ತೇವೆ.
ಅಶೋಕ್ : ಗ್ಯಾರಂಟಿ ನಾ ಸರ್?
ಅಶೋಕ್ : ಪರಮೇಶ್ವರ್ ನಿಮ್ಮ ಜೊತೆಗೆ ನಿಂತಿದ್ದಾರೆ
ಸಿದ್ದರಾಮಯ್ಯ: 140 ಶಾಸಕರು ನಮ್ಮ ಜೊತೆಗೆ ನಿಂತಿದ್ದಾರೆ. ನಮ್ಮ ಸರ್ಕಾರಕ್ಕೆ ಐದು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. 2028 ಕ್ಕೆ ನಾವೇ ಬರ್ತೀವಿ.
ಸುನೀಲ್ ಕುಮಾರ್ : ನಿಮ್ಮ ಮಾತಿನಿಂದ ಪರಮೇಶ್ವರ್ ಅವರಿಗೆ ಬೇಸರ ಆಗಿದೆ.
ಸಿದ್ದರಾಮಯ್ಯ: ಬಿಜೆಪಿ ಎರಡು ಬಾರಿ ಅಧಿಕಾರ ಮಾಡಿದೆ. ಆದರೆ ಜನರ ಆಶೀರ್ವಾದ ಸಿಕ್ಕಿದ್ಯಾ? ಹಿಂಬಾಗಿಲಿನಿಂದ ಬಂದಿದ್ದು.
ಅಶೋಕ್: 2018 ರಲ್ಲಿ ಜೆಡಿಎಸ್ ಮನೆಗೆ ಹೋಗಿದ್ರಲ್ಲಾ?
ಸಿದ್ದರಾಮಯ್ಯ: ನಾವು ಅವರ ಮನೆಗೆ ಹೋಗಿಲ್ಲ, ಬಿಜೆಪಿ ಬರಬಾರದು ಎಂದು ಮೈತ್ರಿ ಮಾಡಿದ್ದು. ಇವಾಗ ನೀವು ಅವರ ಮನೆ ಬಾಗಿಲಿಗೆ ಹೋಗಿಲ್ವಾ?
ಸಿದ್ದರಾಮಯ್ಯ: ನಮ್ಮಲ್ಲಿ ಹೈಕಮಾಂಡ್ ಇದೆ. ನಾಯಕತ್ವ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಜನರ ಆಶೀರ್ವಾದ ಇಲ್ಲ. ವಿರೋಧ ಪಕ್ಷದಲ್ಲಿ ಶಾಶ್ವತವಾಗಿ ಕೂರಲಿದೆ. ನಾನೇ ಸಿಎಂ, ಆದರೆ ಎಲ್ಲಿಯವರೆಗೆ ? ಹೈಕಮಾಂಡ್ ಸೂಚನೆ ನೀಡುವವರೆಗೆ.
ಸುರೇಶ್ ಕುಮಾರ್: ಸಿದ್ದರಾಮಯ್ಯ ಅವರ ಮಾತಿನಲ್ಲಿ ನಾನು ಹೋಗಿ ನಾವು ಎಂದಾಗಿದೆ.
ಸುನೀಲ್ ಕುಮಾರ್ : ಇಲ್ಲೇ ಇರುವುದು ಸಮಸ್ಯೆ. ಮೊದಲು ನಾನೇ ಸಿಎಂ ಐದು ವರ್ಷ ಅಂದಿದ್ದೀರಿ, ಇವಾಗ ಹೈಕಮಾಂಡ್ ಅನ್ನುತ್ತೀರಿ.



