ಬೀದರ್; ಅಧಿಕಾರ ದಾಹಕ್ಕಾಗಿ ಏನು ಮಾಡಲು ಹಿಂಜರಿಯದವರು ಎಂದರೆ ಅದು ಬಿಜೆಪಿಯವರು. ಅವರು ಯಾವ ಮಟ್ಟಕ್ಕೂ ಇಳಿಯಲು ತಯಾರಾಗಿರುತ್ತಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೀದರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ೧೦೦ ಕೋಟಿ ರೂ. ಆಫರ್ ವಿಚಾರವಾಗಿ ಮಾತನಾಡಿದ ಅವರು, ಈ ರಾಜ್ಯದ ಜನರಿಗೆ ಬಿಜೆಪಿ ನಾಯಕರು ಉತ್ತರ ನೀಡಲಿ. ೧೫ ಜನ ಶಾಸಕರನ್ನು ಖರೀದಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಸಿಎಂ ಆಗಲು ೨೫೦೦ ಕೋಟಿ ರೂ. ಕೊಡಬೇಕು ಎಂದು ಸ್ವತಃ ಯತ್ನಾಳ್ ಹೇಳಿದ್ದರು. ಇನ್ನೂ ಸಚಿವರಾಗಲು ೫೦೦ ಕೋಟಿ ಕೊಡಬೇಕು ಎಂದು ಹೇಳಿದ್ದರು. ಯತ್ನಾಳ್ ಬಿಜೆಪಿ ವಿರುದ್ಧ ಏನೇ ಹೇಳಿದ್ದರೂ ಅದು ನೂರಕ್ಕೆ ನೂರು ಸತ್ಯವಿದೆ. ಯತ್ನಾಳ್‌ಗೆ ಏನಾದರೂ ಇಲ್ಲಿಯವರೆಗೆ ನೋಟಿಸ್ ಬಂದಿದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಒಂದು ಮನೆ ನೂರು ಬಾಗಿಲು ಆಗಿವೆ. ಪಶ್ಚಾತ್ತಾಪ ಮಾಡಿಕೊಳ್ಳಲು ಬಿಜೆಪಿಯವರು ಪಾದಯಾತ್ರೆ ಮಾಡಲಿ. ವಕ್ಫ್ ವಿವಾದ ಹುಟ್ಟು ಹಾಕಿದ್ದು, ಮೊದಲು ನೋಟಿಸ್ ನೀಡಿದ್ದು ಬಿಜೆಪಿಯವರು. ಅಪರಾಧ ಮಾಡುವವರು, ದೂರು ನೀಡುವವರು, ವಿಚಾರಣೆ ಮಾಡುವವರು, ತೀರ್ಪು ನೀಡುವವರು ಎಲ್ಲವೂ ಬಿಜೆಪಿಯವರೇ. ಇದನ್ನೂ ಜನ ಅರ್ಥ ಮಾಡಿಕೊಳ್ಳುತ್ತಾರೆ. ಬಿಜೆಪಿ ಮುಗಿದ ಅಧ್ಯಾಯ, ಚರ್ಚೆ ಮಾಡಿ ಸಮಯ ಹಾಳು ಮಾಡಲಿ ಎಂದು ಹೇಳಿದರು.