ಹಾವೇರಿ: ರಾಜ್ಯದಲ್ಲಿ ಜನರ ಪಾಲಿಗೆ ಕಾಂಗ್ರೆಸ್ ಸತ್ತಿದೆ. ರಾಜ್ಯ ಸರ್ಕಾರದ ದುರಾಡಳಿತ ನೋಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಆ. 14 ರಂದು ಹಾವೇರಿಯಲ್ಲಿ ನಡೆಯಲಿರುವ ಗಂಗಮ್ಮ ಎಸ್ ಬೊಮ್ಮಾಯಿ ಟ್ರಸ್ಟ್ ಸಮಾರಂಭದ ಕಾರ್ಯಕ್ರಮದ ಪೂರ್ವ ಸಿದ್ದತೆಯ ತಯಾರಿ ಹಾಗೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಹಾವೇರಿ ಬಿಜೆಪಿಯನ್ನು ಪ್ರಭಲವಾಗಿ ಕಟ್ಟಬೇಕೆಂದು ತೀರ್ಮಾನ ಮಾಡಿದ್ದೆವೆ ಹಾವೇರಿ ಜಿಲ್ಲೆಯ ಜನ ಸಾಗರವೇ ಬಿಜೆಪಿ ಜೊತೆ ಬರಬೇಕು. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಹೋರಾಟ ಮಾಡಿದರೆ ಜನರು ನಮ್ಮ ಜೊತೆಗೆ ನಿಲ್ಲುತ್ತಾರೆ. ಜನರು ಬಹಳ ಎಚ್ಚರಿಕೆ ಹೊಂದಿದ್ದಾರೆ. ಕೇವಲ ಆಡಳಿತ ಪಕ್ಷಕ್ಕಷ್ಟೇ ಅಲ್ಲ. ವಿರೋಧ ಪಕ್ಷವನ್ನು ಪ್ರಶ್ನಿಸುತ್ತಾರೆ. ನಮ್ಮನ್ನೂ ಕೂಡ ಜನರು ಬಹಳ ಎಚ್ಚರಿಕೆಯಿಂದ ನೋಡುತ್ತಾರೆ. ಹೀಗಾಗಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು. ನಾನೂ ಕೂಡ ಹೆಚ್ಚಿನ ಸಮಯ ನೀಡಿ ಎಲ್ಲ ತಾಲೂಕುಗಳಿಗೆ ಬರುತ್ತೇನೆ ಎಂದರು.
ರಾಜ್ಯದಲ್ಲಿ ಈ ಸರ್ಕಾರ ಜನರ ಪಾಲಿಗೆ ಸತ್ತಿದೆ. ರೈತರ ವಿಚಾರದಲ್ಲಿ ಸಿಎಂ ಅವರಿಗೆ ತಿರಸ್ಕಾರ ಮತ್ತು ತಾತ್ಸಾರ ಇದೆ. ರೈತರಿಗೆ ಬೀಜ ಗೊಬ್ಬರ ಕೊಡುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ. ಎರಡು ವರ್ಷದಿಂದ ಬೆಳೆನಾಶವಾಗಿದೆ ಒಂದು ನೈಯಾಪೈಸೆ ಬಿಡುಗಡೆ ಮಾಡಿಲ್ಲ. ನಮ್ಮ ಕಾಲದಲ್ಲಿ ಕೇಂದ್ರ ಸರ್ಕಾರ ನೀಡುವ ಹಣದ ಎರಡು ಪಟ್ಟು ಪರಿಹಾರ ನೀಡಿದ್ದೇವು. ಸುಮಾರು 7 ಸಾವಿರ ಕೋಟಿ ಪರಿಹಾರ ನೀಡಿದ್ದೇವು ಎಂದು ಹೇಳಿದರು.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ 20 ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಸುಮಾರು 20 ಸಾವಿರ ಕೋಟಿ ರೂ. 7 ಕೋಟಿ ರೈತರಿಗೆ ಹಣ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯ 1. 56 ಲಕ್ಷ ರೈತರಿಗೆ 30.07 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 1.07 ಲಕ್ಷ ರೈತರಿಗೆ 23 ಕೋಟಿ ರೂ. ಹಣ ಬಿಡುಗಡೆಯಾಗಿದೆ. ನಿರಂತರವಾಗಿ ಹಣ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಮತ್ತು ಕಿಸಾನ್ ಸಮ್ಮಾನ್ ಯೋಜನೆಯಿಂದ ಕರ್ನಾಟಕದಲ್ಲಿ ಬಹಳ ದೊಡ್ಡ ಪ್ರಮಾಣದ ಅನುಕೂಲವಾಗಿದೆ. ನಾವು ರೈತರಿಗೆ ಸಹಾಯ ಮಾಡಿದ್ದರಿಂದ ದೊಡ್ಡ ಮಟ್ಟದ ಪ್ರಯೋಜನ ಆಗಿದೆ ಎಂದರು
ನಮ್ಮ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಇಟ್ಟುಕೊಂಡು ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ಕೊಡಬೇಕು. ಯಾರಾದರೂ ಕೇಂದ್ರದ ವಿರುದ್ದ ಮಾತನಾಡಿದರೆ ಅವರಿಗೆ ತಕ್ಕ ಉತ್ತರ ಕೊಡಬೇಕು ಎಂದರು. ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕೆನ್ನುವುದು ನನ್ನ ಸಂಕಲ್ಪ ಮತ್ತು ಗುರಿ. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡೋಣ ಈಗಿನ ಕಾಂಗ್ರೆಸ್ ಆಡಳಿತ ನೋಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.