ಶಿಕಾರಿಪುರ: ರಾಜ್ಯದಲ್ಲಿ 25 ರಿಂದ 26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಆಡಳಿತಸೌಧದಲ್ಲಿರುವ 137ನೇ ಮತಗಟ್ಟೆ ಕೇಂದ್ರಕ್ಕೆ ಮಂಗಳವಾರ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಇಂದು ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ನರೇಂದ್ರ ಮೋದಿ ಪ್ರಧಾನಿ ಮಾಡಲು ರಾಜ್ಯದಿಂದ 25ರಿಂದ26 ಸ್ಥಾನ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜಾತಿ ವಿಷಯ ಬರಲ್ಲ. ಮೋದಿ ಪ್ರಧಾನಮಂತ್ರಿ ಆಗಬೇಕು ಎಂಬುದು ಜನರ ಉದ್ದೇಶವಾಗಿದೆ. ದೇಶದಲ್ಲಿಯೇ ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಕಾರ್ಯಕರ್ತರು ಇದ್ದಾರೆ ಹಾಗೂ ಅವರ ಕೈ ಬಲಪಡಿಸುತ್ತಾರೆ. ಕಳೆದ ಲೋಕಸಭೆ ಚುನಾವಣೆ 25 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು,ಈ ಬಾರಿ ಗೆದ್ದಿರುವ ಎಲ್ಲಾ ಕ್ಷೇತ್ರಗಳನ್ನು ಉಳಿಸಿ ಕೊಳ್ಳುತ್ತೇವೆ. ಹೊಸ ಇತಿಹಾಸ ನಿರ್ಮಿಸುತ್ತೇವೆ. ಜನರ ಉತ್ಸಾಹ ಬಿಜೆಪಿ ಪರ ಇದೆ
28 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ,ಫಲಿತಾಂಶ ಬಿಜೆಪಿ ಪರವಾಗಿ ಬರುತ್ತದೆ. ಕಾಂಗ್ರೆಸ್ ಗೆ ಅಚ್ಚರಿ ಫಲಿತಾಂಶ ಬರಲಿದೆ ಎಂದರು.
ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆ ಆಧಾರದ ಮೇಲೆ 20 ಸ್ಥಾನ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಜೂನ್ 4 ರಂದು ಕಾಂಗ್ರೆಸ್ ಗೆ ಆಘಾತ ಆಗಲಿದೆ.
ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ಕಾಣದ ಕೈಗಳು ಪೆನ್ ಡ್ರೈವ್ ಪ್ರಕರಣ ಹಿಂದೆ ಇದೆ. ಸಿಬಿಐ ತನಿಖೆಗೆ ಅವಕಾಶ ನೀಡಬೇಕು. ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಲೆ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ. ತುಂಬಾ ಒಳ್ಳೆಯ ಅಂತರದಲ್ಲಿ ಈ ಬಾರಿ ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಚುನಾವಣೆ ಎರಡು ಕುಟುಂಬಗಳ ಮಧ್ಯೆ ನಡೆಯುವ ಚುನಾವಣೆ ಅಲ್ಲ. ಎರಡು ಸಿದ್ದಾಂತಗಳ ಮಧ್ಯೆ ನಡೆಯುವ ಚುನಾವಣೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಜನ ಬೇಸತ್ತಿದ್ದಾರೆ. ಯೋಜನೆ ಪಡೆಯಲು ಹಲವು ನಿಯಮಗಳನ್ನು ಹಾಕಿದ್ದಾರೆ. ಗ್ಯಾರಂಟಿ ಯೋಜನೆಗೆ ನಮ್ಮ ಜೇಬಿನಿಂದ ಹಣ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.