ಮೈಸೂರು: ದೇಶದ ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷವನ್ನು ಮುಗಿಸುವ ಹುನ್ನಾರವನ್ನು ಕೇಂದ್ರ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಮಿಳುನಾಡಿನಲ್ಲಿ ಎಐಡಿಎಂಕೆ ಮುಗಿಸಿದರು. ಒಡಿಸ್ಸಾದಲ್ಲಿ ಬಿ.ವಿ.ಪಟ್ನಾಯಕ್ ಸಹಾಯ ಪಡೆದು ಅದನ್ನು ಪೂರ್ಣವಾಗಿ ಮುಗಿಸಿದರು. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ನಾಲ್ಕು ಭಾಗವಾಗಿಸಿದರು. ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಗೆದ್ದಿದ್ದರೂ ಮಮತಾ ಬ್ಯಾನರ್ಜಿ ಪಕ್ಷದವರನ್ನು ಒಡೆದು ತಮ್ಮತ್ತ ಬರುವಂತೆ ಮಾಡುತ್ತಿದ್ದಾರೆ. ಜೆಡಿಎಸ್ ಅನ್ನು ಮೂರು ತಿಂಗಳಲ್ಲಿ ಪೂರ್ಣ ಮುಳುಗಿಸುವಂತಹ ಕೆಲಸ ಮಾಡುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮನೆ ಬಾಗಿಲು ತೆರೆದಿರುತ್ತದೆ ಎಂದು ಹೇಳಿದ್ದಾರೆಂದರು.
ಜೆಡಿಎಸ್ ಗೆ ಮಾರ್ಮಘಾತ: ರಾಜ್ಯ ಸಭಾ ಚುನಾವಣೆಗೆ ಕೊನೆಯ ದಿನವಾಗಿತ್ತು. ಮೊನ್ನೆ ತಡರಾತ್ರಿವರೆಗೂ ೮ ತಾಸು ಹಿಂದೆ ಘೋಷಣೆ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಘೋಷಣೆ ಮಾಡುತ್ತಾರೆಂದು ಜನ ಕಾಯುತ್ತಿದ್ದರು. ಆದರೆ, ರಾಜ್ಯದ ಜನತೆಯ ಮುತ್ಸದಿ ರಾಜಕಾರಣಿಗೆ ಅವಮಾನ, ಅಪಮಾನ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಅನ್ನು ಬೈಯುವುದಕ್ಕೆ ಬಳಸಿಕೊಂಡರು. ವೀಲ್ ಚೇರನಲ್ಲಿ ಕುಳಿತು ರಾಜ್ಯ ಹಾಗೂ ದೇಶದ ಸಮಸ್ಯೆ ಬೆಳಕು ಚೆಲ್ಲಿದ್ದರು. ಜತೆಗೆ ಬಿಜೆಪಿ ಹಾಗೂ ಮೋದಿಯನ್ನು ಹೊಗಳುತ್ತಿದ್ದರು. ಹೀಗಿದ್ದರೂ ಅವರಿಗೆ ರಾಜ್ಯ ಸಭಾ ಸ್ಥಾನ ನೀಡದೇ ಜೆಡಿಎಸ್ ಗೆ ಮರ್ಮಾಘಾತ ಮಾಡಿದ್ದಾರೆ. ಇನ್ನಾದರೂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹತ್ತು ದಿನದ ಹಿಂದೆಯೇ ಕೋರ್ ಕಮಿಟಿ ಸಭೆ ನಡೆಸಿ ಎಚ್.ಡಿ.ದೇವೇಗೌಡರ ಹೆಸರು ಶಿಫಾರಸ್ಸು ಮಾಡಿದ್ದೇವೆಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಶಿಫಾರಸ್ಸಿನಲ್ಲಿದ್ದ ಆರು ಮಂದಿ ಪೈಕಿ ನಾಗರಾಜ್ ಹೆಸರೇ ಇರಲಿಲ್ಲ. ಹೀಗಾದರೆ ಶಿಫಾರಸ್ಸು ಮಾಡುವ ಉದ್ದೇಶವೇನು? ಶಿಫಾರಸ್ಸು ಪಟ್ಟಿ ಎಚ್.ಡಿ.ದೇವೇಗೌಡರಿಗೆ ತೋರಿಸಿ ಅವರನ್ನು ಮುಟ್ಟಾಳರನ್ನಾಗಿ ಮಾಡುವ ಕೆಲಸ ಬಿಜೆಪಿ ಮಾಡಿತೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದ್ದು ಈ ಬಗ್ಗೆ ಅವರೇ ಉತ್ತರಿಸಬೇಕಿದೆ ಎಂದು ಹೇಳಿದರು.
ಮೂರು ತಿಂಗಳಲ್ಲಿ ಎಚ್‌ಡಿಕೆ ಮಾಜಿ: ಕೇಂದ್ರದಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮಂತ್ರಿ ಮಾಡಿ ಎನೂ ಮಾಡದಂತೆ ಮಾಡಿದ್ದಾರೆ. ಎನ್‌ಡಿಎಫ್, ಎಚ್‌ಎಂಟಿ, ಭದ್ರಾವತಿ ಸ್ಟೀಲ್ ಕಂಪನಿ ಮುಚ್ಚು ಹೋಗುತ್ತಿವೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಒಂದಾದರೂ ಸಭೆ ನಡೆಸಿದ್ದೀರಾ?, ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ. ನೂರಕ್ಕೆ ನೂರ ರಷ್ಟು ಮೂರು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವ ಕೆಲಸ ಬಿಜೆಪಿ ಮಾಡಲಿದೆ ಎಂದು ಹೇಳಿದರು. ಬಿಜೆಪಿ ನಂಬಿದರೆ ಎನೇಲ್ಲಾ ಆಗುತ್ತದೆ ಎಂಬುದಕ್ಕೆ ಇದೆಲ್ಲಾ ಉದಾಹರಣೆಯಾಗಿದೆ. ತಂದೆಗಿಂತ ಸಚಿವ ಸ್ಥಾನವೇ ಮುಖ್ಯವಾಯಿತೆ ಎಂದು ಹೇಳಿದರು.
ಕೇಂದ್ರ ಬಿಜೆಪಿಗೆ ಡಿಎಂಕೆ, ಟಿಎಂಸಿಯ ೨೦ ಎಂಪಿಗಳು ಬೆಂಬಲ ಸೂಚಿಸಿದರೆ ರಾಜ್ಯ ರಾಜಕೀಯದ ಚಿತ್ರಣ ಬದಲಾವಣೆ ಆಗಲಿದ್ದು, ಇಬ್ಬರೂ ಕೇಂದ್ರದ ಮಂತ್ರಿ ಸ್ಥಾನ ಕಿತ್ತು ಮನೆಗೆ ಕಳುಹಿಸುತ್ತಾರೆ. ದೇವೇಗೌಡರ ಮೇಲೆ ನಮಗೆ ಅಪಾರ ಗೌರವವಿದೆ. ರೈತ ಕುಟುಂಬದಿಂದ ಪ್ರಧಾನಿ ಹುದ್ದೆಗೇರಿದವರಾಗಿದ್ದಾರೆ. ೧೪ ತಿಂಗಳು ಪ್ರಧಾನಿಯಾಗಲು ಅವಕಾಶ ನೀಡಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ಮತ್ತೆ ಮಗನನ್ನು ಮುಖ್ಯಮಂತ್ರಿ ಮಾಡಿದ್ದೇವು. ಅವರು ಅಧಿಕಾರ ಕಳೆದುಕೊಂಡರು. ಬಿಜೆಪಿ ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದ್ದಾರೆ. ಒಕ್ಕಲಿಗೆ ಸಮುದಾಯಕ್ಕೆ ಮಾಡಿದ ಘೋರ ಅಪಮಾನ ಇದಾಗಿದೆ. ಬಿಜೆಪಿಯ ಹಿಡನ್ ಅಜೆಂಡ ಮುಂದಿನ ದಿನಗಳಾದರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ವಯಸ್ಸಿ ಕಾರಣದಿಂದ ನಾವು ಕೊಡುವುದಿಲ್ಲ ಎಂದು ಮುಂಚೆನೇ ಹೇಳಿದ್ದರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಅವರ ಹಿರಿತನಕ್ಕೆ ಆದ್ಯತೆ ನೀಡಿ ಕಾಂಗ್ರೆಸ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಆಲೋಚನೆ ಮಾಡುತ್ತಿತ್ತು. ಈಗಲೂ ರಾಜಕಾರಣ ಅರಿತು ಮಾತನಾಡುವ ಅಲೋಚನೆ ಅವರಿಗಿದೆ. ರಾಜಕೀಯ ಎನೇ ಇದ್ದರೂ ಮೂರರಲ್ಲಿ ಒಂದು ಬೆಂಬಲ ಇವರಿಗೆ ಕೊಡುತ್ತಿದ್ದೇವು. ಅಭ್ಯರ್ಥಿಗಳ ಹೆಸರು ಮರೆಮಾಚಿ ಕೊನೆ ಕ್ಷಣದಲ್ಲಿ ಅವರ ಹೆಸರು ಕೈ ಬಿಟ್ಟು ವಂಚಿಸಿದ್ದಾರೆ. ಬಿಜೆಪಿಯ ಐಟಿಸೆಲ್ ನಿಂದ ಬೇರೆ ರಾಜ್ಯದಿಂದ ಮಾಡುವುದಾಗಿ ಸುಳ್ಳು ಹೇಳುತ್ತಿದ್ದಿರಿ ಇದನ್ನು ನಿಲ್ಲಸಬೇಕೆಂದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಜೆಡಿಎಸ್ ನ ಬಹುತೇಕ ಮಂದಿ ಜೆಡಿಎಸ್ ಸೇರಿದ್ದವರೂ ಈಗ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ. ಪ್ರಮುಖ ಆರು ಗ್ಯಾರಂಟಿ ನೀಡಿದ್ದಾರೆ. ಎಲ್ಲರಿಗೂ ಉಚಿತ ಬಸ್ ಪಾಸ್, ಎಲ್ಲಾ ತಾಲ್ಲೂಕಿನಲ್ಲಿ ೧೦ಸಾವಿರ ಕೋಟಿ ಅನುದಾನ ನೀಡಿ ಯುವ ಸಮೂಹವನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಹತ್ತು ದಿನದಲ್ಲಿ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಎಸ್ ಐಆರ್ ೧೦೧೯೦೨ ಮ್ಯಾಪಿಂಗ್ ಆಗದೆ ಇವೆ. ಇದನ್ನು ಕಡಿಮೆ ಮಾಡಬೇಕು. ಶೇ.೯೬.೩೬ ಮ್ಯಾಪಿಂಗ್ ಆಗಿದ್ದು, ಶೇ.೯೯ಗೆ ತಂದು ನಿಲ್ಲಿಸಬೇಕೆಂದು ಡಿಸಿಗೆ ಮನವಿ ಮಾಡುತ್ತೇನೆಂದರು.
ಮೇಕೆದಾಟು ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಪಿಟಿಶಿಯನ್ ಹಾಕಿದ್ದಕ್ಕೆ ತಿಂಗಳಿಗೆ 170 ಟಿಎಂಸಿ ನೀರು ಬಿಟ್ಟು ಉಳಿದ ನೀರನ್ನು ರಾಜ್ಯ ಬಳಕೆಗೆ ಮುಕ್ತ ಅವಕಾಶ ನೀಡಿದೆ. ಆದರೆ, ಮೇಕೆದಾಟು ಯೋಜನೆ ಜಾರಿಗೆ ಡಿಪಿಆರ್ ಹಾಗೂ ಪರಿಸರ ನಿಯಂತ್ರಣ ಮಂಡಳಿಯಿಂದ ಕೇಂದ್ರ ಬಿಜೆಪಿ ಸರ್ಕಾರ ಅನುಮತಿ ನೀಡಬೇಕು. ಕೇಂದ್ರ ಇಂದು ಅನುಮತಿ ನೀಡಿದರೆ ನಾಳೆಯೇ ಯೋಜನೆ ಜಾರಿ ಮಾಡಲಾಗುವುದು ಎಂದು ಹೇಳಿದರು. ಪ್ರಹ್ಲಾದ್ ಜೋಶಿ ಸೇರಿ ಕೆಲ ಸಂಸದರು ಮೇಕೆದಾಟು ಯೋಜನೆ ತಡೆಯುತ್ತಿದ್ದಾರೆ ಎಂದು ಲಕ್ಷ್ಮಣ್ ಕಿಡಿಕಾರಿದರು.



