ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ಬಾಯ್ಲರ್ ಸ್ಪೋಟ ದುರಂತದಲ್ಲಿ ಎಂಟು ಮಂದಿ ಬಡ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ದುರಂತಕ್ಕೆ ನೇರ ಕಾರಣರಾದ ಕಾರ್ಖಾನೆ ಮಾಲೀಕರ ವಿರುದ್ಧ ಇದುವರೆಗೆ ಯಾವುದೇ ದೂರು ದಾಖಲಾಗದೇ, ಕೇವಲ ಕಾರ್ಖಾನೆ ನೌಕರರ ಮೇಲೆ ಮಾತ್ರ ಪ್ರಕರಣ ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಖಾನೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಬಾಯ್ಲರ್ ದುರಸ್ತಿ ಕಾರ್ಯ ನಡೆಸಿದ್ದೇ ದುರಂತಕ್ಕೆ ಕಾರಣ ಎಂಬ ಆರೋಪಗಳು ಬಲವಾಗಿವೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಮಿಕರನ್ನು ಅಪಾಯಕ್ಕೆ ದೂಡಿದ ಪರಿಣಾಮ ಎಂಟು ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಂತದ ಬಳಿಕ ಸೂಕ್ತ ಪರಿಹಾರ ಹಾಗೂ ನ್ಯಾಯಕ್ಕಾಗಿ ಮೃತ ಕಾರ್ಮಿಕರ ಸಂಬಂಧಿಕರು ಶವವಿಟ್ಟು ಪ್ರತಿಭಟನೆ ನಡೆಸಿದರೂ ಆಡಳಿತ ಹಾಗೂ ಪೊಲೀಸರ ನಿರ್ಲಕ್ಷ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬರುತ್ತಿದೆ. ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಘಟನೆ ನಡೆದು ಎರಡು ದಿನಗಳಾದರೂ ಈವರೆಗೆ ಯಾರ ಬಂಧನವೂ ಆಗಿಲ್ಲ. ವಿಕ್ರಮ್ ಇನಾಮದಾರ, ವಿಜಯ್ ಮೆಟಗುಡ್ಡ ಹಾಗೂ ಪ್ರಭಾಕರ್ ಕೋರೆ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದ್ದ ಪೊಲೀಸರು ಮೌನ ವಹಿಸಿರುವುದು ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಗಿದೆ.ಇಲ್ಲಿಯವರೆಗೆ ದುರಂತಕ್ಕೆ ಕಾರಣವಾಗಿದ್ದ ಕಾರ್ಖಾನೆ ಜನರಲ್ ಮ್ಯಾನೇಜರ್ ಸೇರಿ ಮೂವರು ನೌಕರರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದ್ದು, ಮಾಲೀಕರ ವಿರುದ್ಧ ದೂರು ದಾಖಲಾಗದಿರುವುದು ತನಿಖೆ ಮೇಲೆ ಪ್ರಭಾವಿಗಳ ಒತ್ತಡವಿದೆಯೇ ಎಂಬ ಶಂಕೆ ಹುಟ್ಟುಹಾಕಿದೆ.ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಕ್ಕಾಗಿ ಮೃತರ ಕುಟುಂಬಗಳು ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



