ಗುಂಡ್ಲುಪೇಟೆ: ಬ್ರಾಹ್ಮಣ ಸಮಾಜದವರು ಪಂಥ ಭೇದ ಮಾಡದೇ ಸಂಘಟಿತರಾದರೆ ಮಾತ್ರ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ತಾಲೂಕು ಬ್ರಾಹ್ಮಣ ಸಭಾ, ಕೌಂಡಿನ್ಯ ವಿಪ್ರಬಳಗ ಹಾಗೂ ಶಾರದ ಸತ್ಸಂಗ ಸಮಾಜದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜದವರು ಎಚ್ಚೇತ್ತುಕೊಳ್ಳಬೇಕಾಗಿದೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿವಿಮಾತು ಹೇಳಿದರು.
ಇಂದು ಬ್ರಾಹ್ಮಣ ಸಮಾಜವನ್ನು ತುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಬೇಕು. ಹೀಗಿದ್ದಲ್ಲಿ ಮಾತ್ರ ನಮಗೆ ಉಳಿಗಾಲ. ಇದನ್ನು ಮನಗಂಡು ಪ್ರತಿಯೊಬ್ಬರು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯದಲ್ಲಿನ ಗೋಲಕದ ಹಣಕ್ಕೆ ಕಣ್ಣು ಹಾಕಿ ಅದನ್ನು ಅನ್ಯ ಧರ್ಮಿಯರ ಅಭಿವೃದ್ಧಿಗೆ ಮೀಸಲಿಡಲು ಮುಂದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಭಟ್ಟ ಮಾತನಾಡಿ, ಹಿಂದಿನ ಕಾಲದಲ್ಲಿ ನಮ್ಮ ಜನಾಂಗದವರು ಸಾಕಷ್ಟು ಕಿರುಕುಳಕ್ಕೆ ಒಳಪಟ್ಟು ಹಳ್ಳಿಗಳನ್ನು ಬಿಟ್ಟು ಹೋದರೂ ಸಹ ಸ್ವಾಭಿಮಾನ ಬಿಡಲಿಲ್ಲ. ಬ್ರಾಹ್ಮಣರು ತಮ್ಮ ಸಂಪ್ರದಾಯ ಹಾಗೂ ಪೂಜಾ ವಿಧಿ ವಿಧಾನಗಳನ್ನು ಬಳಸಿಕೊಂಡು ದಿನ ನಿತ್ಯ ತ್ರಿಕಾಲ ಸಂಧ್ಯಾವಂದನೆ, ದೈವಾರಾಧನೆ ಮಾಡುವುದರಿಂದ ಭಗವಂತ ಕೂಡ ನಮ್ಮನ್ನು ಅನುಗ್ರಹಿಸುತ್ತಾನೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಬ್ರಾಹ್ಮಣ ಸಂಘದ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು.
ಪುರಸಭಾ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್, ತಾಲೂಕು ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ರವಿಕಾಂತ್, ಮಂಜುನಾಥ್, ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್, ಸತೀಶ್, ಬಾಲಸುಬ್ರಹ್ಮಣ್ಯಂ, ವಿ.ಆರ್.ಸುಬ್ಬುರಾವ್, ಪಿ.ಎಸ್.ಶ್ರೀನಿವಾಸ ಮೂರ್ತಿ, ಶ್ರೀಕಂಠ ಮೂರ್ತಿ, ಎನ್.ರಾಜೇಶ್ ಭಟ್ಟ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಶ್ರೀಕಂಠ ಕುಮಾರ್, ಸತ್ಯನಾರಾಯಣ, ವಿಶ್ವನಾಥ್, ಶ್ರೀನಿವಾಸಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.