ಹೊಸದಿಲ್ಲಿ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ ಬರೀ ಟೀಸರ್, ಸಿನಿಮಾ ಇನ್ನೂ ಬಾಕಿ ಇದೆ. ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ದೆಹಲಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ಕೆಲವೇ ದಿನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಎನ್ನುವುದು ಗೊತ್ತಾಗಲಿದೆ.
ಇವರಿಬ್ಬರೂ ಒಬ್ಬರಿಗೊಬ್ಬರು ಬ್ರೇಕ್ ಫಾಸ್ಟ್ ಮಾಡುತ್ತ ಕಾಲಹರಣ ಮಾಡುತ್ತಿದ್ದರೆ, ರಾಜ್ಯದ ಜನರ ಶ್ರೇಯೋಭಿವೃದ್ಧಿ ಯಾರು ಮಾಡುತ್ತಾರೆ ಎನ್ನುವುದು ನಮ್ಮ ಕಾಳಜಿ. ಒಬ್ಬರು ಕುರ್ಚಿಯನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಬ್ಬರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ನಾಟಕ ನಿಲ್ಲಬೇಕು ಎನ್ನುವುದು ರಾಜ್ಯದ ಜನರ ಇಚ್ಚೆಯಾಗಿದೆ ಎಂದು ಹೇಳಿದ್ದಾರೆ.
ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಗೊಂದಲ ನಿವಾರಿಸುವಲ್ಲಿ ವಿಫಲವಾಗಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲಿದೆ ಕಾಂಗ್ರೆಸ್ ಹೈಕಮಾಂಡ್, ಯಾರು ಹೈಕಮಾಂಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ತಮ್ಮ ಮೇಲೆ ಹೈಕಮಾಂಡ್ ಇದೆ ಎಂದು ಹೇಳಿದ ಮೇಲೆ ಹೈಕಮಾಂಡ್‌ಗೆ ಏನು ಅರ್ಥ ಇದೆ. ಇದು ಒಂದು ಕುಟುಂಬದ ವಿಷಯ ಆಗಿದೆ ಎಂದು ವ್ಯಂಗವಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಾಗುತ್ತಿರುವ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲಗಳು ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದನ್ನೇ ಗಾಳವನ್ನಾಗಿ ಬಳಕೆ ಮಾಡಿಕೊಂಡು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳಿಗು ಬ್ರೇಕ್ ಹಾಕುವ ನಿಟ್ಟಿನಲ್ಲಿ ಹೈ ಕಮಾಂಡ್ ಸೂಚನೆ ಮೇರೆಗೆ ಸಿಎಂ ನಿವಾಸದಲ್ಲೊಮ್ಮೆ ಮತ್ತು ಇಂದು(ಡಿ.2)ರಂದು ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲೊಮ್ಮೆ ಸಭೆ ಸೇರಲಾಗಿತ್ತು. ಈ ಬಗ್ಗೆ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.



